ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಪುತ್ರ ವಿಜಯೇಂದ್ರ ವಿರುದ್ಧ ದಾಖಲೆ ಬಿಡುಗಡೆ ಮಾಡಿ ಭ್ರಷ್ಟಾಚಾರ ಆರೋಪ ಮಾಡಿದ ಎಮ್ಮೆಲ್ಸಿ ಎಚ್ ವಿಶ್ವನಾಥ್ ವಿರುದ್ಧ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಗುಡುಗಿದ್ದಾರೆ. ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ರಾಜ್ಯದ ವಿವಿಧ ನಿಗಮ ಮಂಡಳಿ ಅಧ್ಯಕ್ಷರುಗಳು ವಾಗ್ದಾಳಿ ನಡೆಸಿದ್ದಾರೆ.
ಹೆಚ್.ವಿಶ್ವನಾಥ್ ಒಬ್ಬ ರಾಜಕೀಯ ವ್ಯಾಪಾರಿ. ಅವರ ಹೇಳಿಕೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ. ಜೆಡಿಎಸ್ ತೊರೆದು ಶಾಸಕತ್ವಕ್ಕೆ ರಾಜೀನಾಮೆ ನೀಡುವಾಗ ಬಿ.ಎಸ್ ಯಡಿಯೂರಪ್ಪನವರ ವಯಸ್ಸು, ಉತ್ಸಾಹ ನಿಮ್ಮ ಸಮಯಸಾಧಕತನದ ಮಬ್ಬಿನ ಕಣ್ಣಿಗೆ ಏಕೆ ಕಾಣಲಿಲ್ಲ? ನಿಮ್ಮ ಆರೋಪ ಟೀಕೆಗಳು ಹತಾಶೆ ಹಾಗೂ ಮಾನಸಿಕ ಸ್ಥಿಮಿತತೆಯ ಅಸ್ತಿತ್ವ ಕಳೆದುಕೊಂಡಿರುವುದನ್ನು ಬಹಿರಂಗಪಡಿಸುತ್ತಿದೆ ಎಂದು ನಿಗಮ ಮಂಡಳಿಗಳ ಅಧ್ಯಕ್ಷರು ವಾಗ್ದಾಳಿ ನಡೆಸಿದ್ದಾರೆ.
Advertisement
Advertisement
ಎಂಜಿನಿಯರ್ ಅಳಿಯನಿಗೆ ಆಯಾಕಟ್ಟಿನ ಹುದ್ದೆಗಳನ್ನು ಕೊಡಿಸುವುದಕ್ಕಾಗಿ, ನಿಮ್ಮ ಮಕ್ಕಳ ರಾಜಕೀಯ ಭವಿಷ್ಯ ರೂಪಿಸುವುದಕ್ಕಾಗಿ, ನಿಮ್ಮ ನೆಂಟರಿಷ್ಟರಿಗೆ ಕಾಂಟ್ಯಾಕ್ಟ್ ಕೊಡಿಸುವುದಕ್ಕಾಗಿ ನಿಮ್ಮ ಇಡೀ ರಾಜಕೀಯ ಜೀವನ ಮೀಸಲಾಗಿರಿಸಿದ್ದೀರಿ. ಈ ವಾಸ್ತವ ಸಂಗತಿ ಕೆ.ಆರ್ ನಗರದಿಂದ ಪ್ರಾರಂಭವಾಗಿ ಹುಣಸೂರು ಹಾದಿಯಾಗಿ ಮೈಸೂರು ಜಿಲ್ಲೆಯನ್ನು ಸುತ್ತುವರಿದು ರಾಜಧಾನಿ ಬೆಂಗಳೂರಿನಲ್ಲಿ ಮಾರ್ದನಿಸುತ್ತಿರುವುದಕ್ಕೆ ನಾವು ಸಾಕ್ಷಿ ಒದಗಿಸಬಲ್ಲೆವು. ಇಂತಹ ಹಿನ್ನೆಲೆಯ ನಿಮಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.
Advertisement
ನಿಮ್ಮ ಸ್ವಾರ್ಥ ಮತ್ತು ಸ್ವಜನ ಪಕ್ಷಪಾತಕ್ಕೆ ರಾಜಕೀಯ ಕ್ಷೇತ್ರವನ್ನು ಮೀಸಲಾಗಿರಿಸಿಕೊಂಡಿದ್ದೀರಿ. ಬಗ್ಗಿದರೆ ಜುಟ್ಟು ಹಿಡಿಯುವುದು, ಎದ್ದರೆ ಕಾಲು ಎಳೆಯುವ ನೈತಿಕ ದಿವಾಳಿತನದ ರಾಜಕಾರಣ ಕಂಡು ಮರುಕಪಡಲೂ ಅಸಹ್ಯವೆನಿಸುತ್ತಿದೆ. ದೇವರಾಜ ಅರಸರಿಂದ ಅಧಿಕಾರದ ಭಿಕ್ಷೆ ಪಡೆದ ನೀವು ಅವರ ಬೆನ್ನಿಗೇ ಇರಿದು ಉಂಡ ಮನೆಗೆ ದ್ರೋಹ ಬಗೆವ ವಿದ್ರೋಹಿ ಸಂಸ್ಕೃತಿಯನ್ನು ಅಂದೇ ಆರಂಭಿಸಿದ್ದೀರಿ. ಮುಂದುವರಿದ ಭಾಗವಾಗಿ ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಹೆಚ್.ಡಿ.ದೇವೇಗೌಡ, ಇದೀಗ ರಾಜಕೀಯದಲ್ಲಿ ಪಾತಾಳಕ್ಕೆ ಬಿದ್ದಿದ್ದ ನಿಮ್ಮನ್ನು ಕನಿಕರದಿಂದ ಮೇಲೆತ್ತಿ ವಿಧಾನ ಪರಿಷತ್ ಸ್ಥಾನ ಕರುಣಿಸಿದ ಬಿಜೆಪಿ ಹಾಗೂ ಯಡಿಯೂರಪ್ಪನವರ ವಿಶ್ವಾಸದ ಹೃದಯಕ್ಕೆ ಘಾತುಕತನದಿಂದ ಇರಿಯುವ ದೂರ್ತತನ ಪ್ರದರ್ಶಿಸುತ್ತಿದ್ದೀರಿ ಎಂದು ಗರಂ ಆಗಿದ್ದಾರೆ.
Advertisement
ಯಡಿಯೂರಪ್ಪನವರ ವಯಸ್ಸಿನ ಬಗ್ಗೆ ಮಾತನಾಡುತ್ತಿರುವ ನಿಮಗೆಷ್ಟು ವಯಸ್ಸು? ನೀವೊಬ್ಬ ಆದರ್ಶ ಪ್ರತಿಪಾದಿಸುವ ವ್ಯಕ್ತಿತ್ವದವರೆ ಆಗಿದ್ದರೆ ‘ಬೆನ್ನುಹತ್ತಿದ ಬೇತಾಳದಂತೆ ಪರಿಪರಿಯಾಗಿ ಅಂಗಲಾಚಿ’ ಸಾಹಿತ್ಯ ಕ್ಷೇತ್ರದ ಧೀಮಂತರಿಗೆ ದಕ್ಕಬೇಕಾಗಿದ್ದ ವಿಧಾನ ಪರಿಷತ್ ಸದಸ್ಯತ್ವವನ್ನು ‘ಇನ್ನೊಬ್ಬರಿಂದ ಬರೆಸಿಕೊಂಡ ಒಂದೆರಡು ಕಳಪೆ ಪುಸ್ತಕಗಳನ್ನು ಮುಂದಿಟ್ಟುಕೊಂಡು ಸಾಹಿತಿ ಎಂಬ ಹಣೆಪಟ್ಟಿ ಹಚ್ಚಿಕೊಂಡು’ ಎಂಎಲ್‍ಸಿ ಸ್ಥಾನವನ್ನು ಕಸಿದುಕೊಂಡಿದ್ದನ್ನು ಈ ರಾಜ್ಯದ ಜನತೆ ಹಾಗೂ ಸಾಹಿತ್ಯ ವಲಯ ಮರೆಯಲು ಸಾಧ್ಯವಿಲ್ಲ ಎಂದು ಕಾಲೆಳೆದಿದ್ದಾರೆ. ಇದನ್ನೂ ಓದಿ: ನಾಯಕತ್ವ ಬದಲಾವಣೆ, ನಾನು ವ್ಯಕ್ತಿ ಪೂಜೆ ಮಾಡುವವನಲ್ಲ: ಅಪ್ಪಚ್ಚು ರಂಜನ್
ನಿಮ್ಮ ಮಾತಿಗೂ ಕೃತಿಗೂ ಯಾವುದೇ ಸಂಬಂಧವಿಲ್ಲದ ವ್ಯಕ್ತಿತ್ವ ನಿಮ್ಮದು ಎಂಬುದನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ತಿಳಿದಿದೆ. ನಿಮಗೆ ನೈತಿಕತೆ ಎಂಬುದು ಇದ್ದದ್ದೇ ಆಗಿದ್ದಲ್ಲಿ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದ ನೀವು ಸಕ್ರಿಯ ರಾಜಕಾರಣದಿಂದ ದೂರ ಉಳಿದು ಯುವಕರನ್ನು ಉತ್ತೇಜಿಸಬೇಕಾಗಿತ್ತು. ಅರ್ಹರೊಬ್ಬರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನವನ್ನು ಕೊಡಿಸಲು ವಕಾಲತ್ತು ವಹಿಸಬೇಕಿತ್ತು. ಇಂತಹ ಯಾವ ಉದಾರತೆಯನ್ನೂ ಜೀವನದಲ್ಲಿ ಅಳವಡಿಸಿಕೊಳ್ಳದ ನೀವು ಯಾವ ಮುಖವಿಟ್ಟುಕೊಂಡು ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಹೇಳಿಕೆ ನೀಡುತ್ತೀರಿ? ಬಿ.ವೈ ವಿಜಯೇಂದ್ರ ಅವರು ಸ್ವಸಾಮಥ್ರ್ಯದ ಅಪರೂಪದ ಸಂಘಟನಾ ಚತುರ, ಈ ಹಿನ್ನೆಲೆಯಲ್ಲಿ ಪಕ್ಷ ಅವರನ್ನು ಗುರುತಿಸಿ ಸ್ಥಾನ ನೀಡಿದೆ ಜನತೆ ಅವರನ್ನು ಮೆಚ್ಚಿ ಒಪ್ಪಿದ್ದಾರೆ. ಚುನಾವಣಾ ಕಾರ್ಯದ ಜವಾಬ್ದಾರಿ ಹೊತ್ತಾಗ ಅವರನ್ನು ಅಪ್ಪಿ ಆಶೀರ್ವದಿಸಿದ್ದಾರೆ ಎಂದಿದ್ದಾರೆ.
ಬಿಜೆಪಿ ಮತ್ತು ಯಡಿಯೂರಪ್ಪನವರಿಂದ ಪಡೆದ ವಿಧಾನ ಪರಿಷತ್ ಸದಸ್ಯತ್ವ ಸ್ಥಾನದ ಭಿಕ್ಷೆಯನ್ನು ರಾಜೀನಾಮೆ ಮೂಲಕ ಹಿಂದಿರುಗಿಸಿ ಗೌರವ ಉಳಿಸಿಕೊಳ್ಳಿ, ಇಲ್ಲವೇ ಬಿಜೆಪಿಯಿಂದ ಹೊರದೂಡುವ ಅಪಮಾನದ ಕ್ಷಣಗಳನ್ನು ಎದುರಿಸಲು ಸಿದ್ದರಾಗಿ. ವಿಶ್ವನಾಥರೇ, ಕಳೆದ ಕೆಲ ದಿನಗಳಿಂದ ಮಾನ್ಯ ಯಡಿಯೂರಪ್ಪನವರು ಹಾಗೂ ಬಿಜೆಪಿ ವಿರುದ್ಧ ನೀಡುತ್ತಿರುವ ಹೇಳಿಕೆಗಳು ಹಾಗೂ ಆರೋಪಗಳು ‘ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ. ನೀವೊಬ್ಬ ಬಿಜೆಪಿಯೂ ಅಲ್ಲ, ಕಾಂಗ್ರೆಸ್ಪೂ ಅಲ್ಲ, ದಳವೂ ಅಲ್ಲ ಬದಲಾಗಿ ನೀವೊಬ್ಬ ‘ರಾಜಕೀಯ ವ್ಯಾಪಾರಿ’ ಎನ್ನುವುದು ರಾಜ್ಯದ ಜನತೆಗೆ ಗೊತ್ತಿದೆ. ಹೀಗೆ ಹತ್ತಾರು ವಿಚಾರಗಳನ್ನು ಪ್ರಸ್ತಾಪಿಸಿ ಎಚ್ ವಿಶ್ವನಾಥ್ ವಿರುದ್ಧ ನಿಗಮ ಮಂಡಳಿಗಳ ಅಧ್ಯಕ್ಷರು ಆಕ್ರೋಶ ಹೊರಹಾಕಿದ್ದಾರೆ.