ಹೆಚ್.ಡಿ.ದೇವೇಗೌಡರ ಹುಟ್ಟುಹಬ್ಬ- ಟ್ವೀಟ್ ಮೂಲಕ ಶುಭಕೋರಿದ ಗಣ್ಯರು

Public TV
3 Min Read
Devegowda

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡ ಅವರಿಗೆ ಇಂದು (ಮೇ 18) ಹುಟ್ಟು ಹಬ್ಬದ ಸಂಭ್ರಮ. ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಿದ್ದರಾಮಯ್ಯ ಹೀಗೆ ಅನೇಕ ಗಣ್ಯರು ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.

ಮೇ 18ರಂದು ಹೊಳೆನರಸಿಪುರ ತಾಲೂಕಿನ ಹರದನಹಳ್ಳಿಯಲ್ಲಿ ಜನಿಸಿದ ದೇವೇಗೌಡ ಅವರು 89ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ದೇವೇಗೌಡರ ಹುಟ್ಟುಹಬ್ಬಕ್ಕೆ ಅನೇಕ ರಾಜಕೀಯ ಮುಖಂಡರು, ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

ಹಿರಿಯ ಮತ್ತು ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಹೆಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರ ಅನುಗ್ರಹ ಸದಾ ನಿಮಗಿರಲಿ ಎಂದು ಮುಂಖ್ಯಮಮತ್ರಿ ಬಿ.ಎಸ್ ಯಡಿಯೂರಪ್ಪನವರು ಟ್ವೀಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

ಶೂನ್ಯದಿಂದ ಮೇಲೆದ್ದು ಬರುವ, ಕನ್ನಡದ ನೆಲದಿಂದ ವಿಶಾಲ ರಾಷ್ಟ್ರ ಆಳುವ, ಕನ್ನಡ, ಕರ್ನಾಟಕಕ್ಕಾಗಿ ಬೆಟ್ಟದಂತೆ ನಿಲ್ಲುವ ಕರ್ನಾಟಕದ ವೀರ ಪರಂಪರೆಗೆ ಹೆಗ್ಗುರುತಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ನಿಮ್ಮ ಅಪಾರ ಅನುಭವ ನಮಗೆ ಸದಾ ದಾರಿ ದೀಪ. ನಿಮ್ಮ ಅಚಲ ಆತ್ಮವಿಶ್ವಾಸ ನಮಗೆ ಪ್ರೇರಣದಾಯಕ ಎಂದು ಕುಮಾರಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ದೇವೇಗೌಡರಿಗೆ ಶುಭ ಹಾರೈಸಿದ್ದು, ಮಾಜಿ ಪ್ರಧಾನಿ ಮತ್ತು ಜೆಡಿಎಸ್ ಪಕ್ಷದ ಹಿರಿಯ ನಾಯಕ ಎಚ್.ಡಿ.ದೇವೇಗೌಡರಿಗೆ ಹುಟ್ಟು ಹಬ್ಬದ ಶುಭಾಶಯಗಳು. ರಾಜ್ಯ ಮತ್ತು ದೇಶಕ್ಕೆ ನಿಮ್ಮ ಅನುಭವದ ಮಾರ್ಗದರ್ಶನ ಸದಾ ಸಿಗಲಿ ಎಂದು ಹಾರೈಸಿದ್ದಾರೆ.

ಹಿರಿಯ ನಾಯಕರು, ಜೆಡಿಎಸ್ ರಾಷ್ಟ್ರಾಧ್ಯಕ್ಷರು, ಮಾಜಿ ಪ್ರಧಾನಿಗಳಾದ ಶ್ರೀ ಎಚ್.ಡಿ.ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಉತ್ತಮ ಆಯುರಾರೋಗ್ಯ ಕರುಣಿಸಲಿ ಎಂದು ಪ್ರಾರ್ಥಿಸುತ್ತಾ, ಇನ್ನಷ್ಟು ದೀರ್ಘಕಾಲ ನಾಡಿಗೆ ತಮ್ಮ ಮಾರ್ಗದರ್ಶನ ದೊರಕಲಿ ಎಂದು ಆಶಿಸುತ್ತೇನೆ ಎಂದು ಬಿವೈ ರಾಘವೇಂದ್ರ ಟ್ವೀಟ್ ಮಾಡಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸದೇ ತಮ್ಮ ಹತ್ತಿರದ ಕೊವಿಡ್ ಸೋಂಕಿತರ ಆರೈಕೆ ಮತ್ತು ನೆರವಿಗೆ ಸಹಾಯ ಮಾಡಬೇಕೆಂದು ಅಭಿಮಾನಿಗಳು ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಎರಡು ದಿನಗಳ ಹಿಂದೆಯೇ ಕೋರಿದ್ದರು. ಸದ್ಯ ಕೊವಿಡ್‍ನಿಂದಾಗಿ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಡಗರ- ಸಂಭ್ರಮದ ಹುಟ್ಟುಹಬ್ಬದ ಆಚರಣೆ ಸಲ್ಲದು. ಸಂಭ್ರಮವನ್ನು ವಿವಿಧ ರೂಪಗಳಲ್ಲಿ ಆಚರಿಸುವ ಬದಲಿಗೆ ಅದೇ ಹಣವನ್ನು ಹತ್ತಿರದ ಕೊವಿಡ್ ಸೋಂಕಿತರ ಆರೈಕೆಗೆ ವಿನಿಯೋಗಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ ಮಾಡಿ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *