ಶಿವಮೊಗ್ಗ: ಮಾಜಿ ಸಿಎಂ ಎಚ್‍ಡಿಕೆ ಅವರು ಗ್ರಾಮ ಪಂಚಾಯ್ತಿ ಸದಸ್ಯನಿಗಿಂತಲೂ ಕೀಳು ಮಟ್ಟಕ್ಕೆ ಇಳಿಯುತ್ತಿದ್ದಾರೆ. ಹಾಗಂತ ಗ್ರಾಮ ಪಂಚಾಯ್ತಿ ಸದಸ್ಯ ಕೀಳು ಅಂತಾ ನಾನು ಹೇಳುತ್ತಿಲ್ಲ. ಅವರು ಕೂಡ ಚುನಾಯಿತ ಜನಪ್ರತಿನಿಧಿಗಳು, ಜನರಿಂದ ಆಯ್ಕೆಯಾಗಿ ಬಂದಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದಂತಹ ವ್ಯಕ್ತಿ ಈ ಮಟ್ಟಕ್ಕೆ ಇಳಿಯುತ್ತಾರೆ ಅಂದರೆ ನನಗೆ ತುಂಬಾ ನೋವು ಆಗುತ್ತಿದೆ ಎಂದು ಸಚಿವ ಈಶ್ವರಪ್ಪ ಮಾಜಿ ಸಿಎಂ ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೊಡ್ಡ ದೊಡ್ಡ ಆರು ಬ್ಯಾಗ್‍ಗಳನ್ನು ತೆಗೆದುಕೊಂಡು ಹೋಗಿದ್ದರು ಎಂದು ಮಾಜಿ ಸಿಎಂ ಎಚ್‍ಡಿಕೆ ಆರೋಪ ಮಾಡಿದ್ದರು. ಎಚ್‍ಡಿಕೆ ಅವರ ಈ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು, ನಿಮ್ಮ ತಂದೆ ದೇವೇಗೌಡರು ಸಹ ಪ್ರಧಾನಿ ಆಗಿದ್ದರು. ಆ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲು ದೇಶದ ಜನ ಬ್ಯಾಗಿನಲ್ಲಿ ಹಾರ, ತುರಾಯಿ ಎಲ್ಲಾ ತೆಗೆದುಕೊಂಡು ಹೋಗುತ್ತಿದ್ದರು. ಹಾಗಾದರೆ ಆ ಸಂದರ್ಭದಲ್ಲಿ ಬ್ಯಾಗ್‍ನಲ್ಲಿ ಏನು ಇರುತಿತ್ತು ಎಂದು ಪ್ರಶ್ನಿಸಿದ್ದಾರೆ.
Advertisement
Advertisement
ರಾಜ್ಯದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರಾಜ್ಯದಿಂದ ಹೊಸದಾಗಿ ನಾಲ್ಕು ಮಂದಿ ಕೇಂದ್ರ ಸಚಿವರಾಗಿದ್ದಾರೆ. ಕೇಂದ್ರದಲ್ಲಿ ರಾಜ್ಯದಿಂದ ಒಟ್ಟು ಆರು ಮಂದಿ ಸಚಿವರಾಗಿದ್ದಾರೆ. ಅವರುಗಳಿಗೆ ಶುಭ ಕೋರಿ ಸನ್ಮಾನಿಸಬೇಕು. ಜೊತೆಗೆ ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಅವರನ್ನು ಸಹ ಸಿಎಂ ಭೇಟಿಯಾಗಿದ್ದಾರೆ. ಈ ವೇಳೆ ಎಲ್ಲರಿಗೂ ಶುಭಕೋರಿ ನೆನಪಿನ ಕಾಣಿಕೆ ನೀಡುವ ಸಲುವಾಗಿ ಬ್ಯಾಗ್ ತೆಗೆದುಕೊಂಡು ಹೋದರೆ, ಅದನ್ನು ಹೆಚ್‍ಡಿಕೆ ಅವರು ಕೆಟ್ಟ ಕಣ್ಣಿನಲ್ಲಿ ನೋಡುತ್ತಾರೆ ಅಂದರೆ ಖಂಡಿತಾ ಅವರನ್ನು ದೇವರು ಮೆಚ್ಚುವುದಿಲ್ಲ ಎಂದಿದ್ದಾರೆ.
Advertisement
ಹೆಚ್ಡಿಕೆ ಅವರಿಗೆ ನಿಜವಾಗಿಯೂ ರಾಜ್ಯದ ಬಗ್ಗೆ ಅಭಿಮಾನ ಇದ್ದರೆ, ಕೇಂದ್ರದ ಮಂತ್ರಿಗಳು ನಮ್ಮ ರಾಜ್ಯಕ್ಕೆ ಒಳ್ಳೆಯದು ಮಾಡಲಿ ಅಂತಾ ಪಕ್ಷ ಭೇದ ಮರೆತು ಅಭಿನಂದನೆ ಸಲ್ಲಿಸಿ ಬರಬೇಕಿತ್ತು. ಅದನ್ನು ಬಿಟ್ಟು ಸಿಎಂ ವಿರುದ್ಧ ಆರೋಪ ಮಾಡುತ್ತಿದ್ದಾರೆ, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಕಿಡಿಕಾರಿದ್ದಾರೆ.
ಮೋದಿ ಅವರು ನಿರೀಕ್ಷೆ ಮಾಡುವಂತಹ ಕೆಳಮಟ್ಟದ ರಾಜಕಾರಣಿ ಅಲ್ಲ. ಯಡಿಯೂರಪ್ಪ ಅವರು ಸಹ ಮೋದಿ ಅವರನ್ನು ಮೆಚ್ಚಿಸಲು, ತೃಪ್ತಿಪಡಿಸಲು ಯಾವುದೋ ಆಸೆ ಆಮಿಷ ತೋರಿಸಲು ಹೋಗಿರಲಿಲ್ಲ. ಮುಖ್ಯಮಂತ್ರಿ ಆಗಿದ್ದಂತಹವರು ಇಂತಹ ಕೀಳುಮಟ್ಟಕ್ಕೆ ಇಳಿಯಬೇಡಿ. ರಾಜ್ಯದ ಜನ ನಿಮ್ಮನ್ನು ಒಪ್ಪುವುದಿಲ್ಲ. ರಾಜ್ಯದ ಜನ ನಿಮಗೆ ಛೀಮಾರಿ ಹಾಕುವಂತಹ ದಿನ ಬರುತ್ತದೆ. ರಾಜ್ಯದ ಜನರ ಕ್ಷಮೆ ಕೇಳಿ ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ. ಆಗ ಮಾತ್ರ ರಾಜ್ಯದ ಜನ ಕುಮಾರಸ್ವಾಮಿ ದೊಡ್ಡ ಮನುಷ್ಯ ಅಂತಾ ಒಪ್ಪಿಕೊಳ್ಳುತ್ತಾರೆ. ಇಲ್ಲ ನಾನು ಇದನ್ನೇ ಮುಂದುವರಿಸುತ್ತೇನೆ ಅಂದರೆ ಮುಂದುವರಿಸಿ ನನ್ನ ಅಭ್ಯಂತರವಿಲ್ಲ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಇದನ್ನೂ ಓದಿ: ಮಂತ್ರಿ ಸ್ಥಾನ ಹೋದರೆ ಗೂಟ ಹೋದ ಹಾಗೆ: ಕೆ.ಎಸ್ ಈಶ್ವರಪ್ಪ