ಚಿಕ್ಕಬಳ್ಳಾಪುರ: ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದ ಡಿ.ಕೆ ಸುರೇಶ್ ನನ್ನ ರಾಜಕೀಯ ವಿರೋಧಿಗಳು, ಅವರಿಂದ ನನಗೆ ಬಹಳ ತೊಂದರೆ ಆಗಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.
ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯದ್ದು ಸದಾ ದ್ವಂದ್ವ ನಿಲುವು, ಬೇಕಾದಾಗ ಯಡಿಯೂರಪ್ಪ ಹತ್ತಿರ ಹೋಗಿ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಾರೆ. ಮತ್ತೆ ಅವರ ಮೇಲೆ ದೂಷಣೆ ಮಾಡುತ್ತಾರೆ. ಕುಮಾರಸ್ವಾಮಿನ ನಂಬಬೇಡಿ ಹತ್ತಿರ ಬಿಟ್ಟುಕೊಳ್ಳಬೇಡಿ. ಅವರು ಅವಕಾಶವಾದಿ ರಾಜಕಾರಣಿ ಅಂತ ನಾನು ಮೊದಲಿಂದ ಹೇಳುತ್ತಲೇ ಇದ್ದೆ ಎಂದು ಕಿಡಿಕಾರಿದ್ದಾರೆ.
ಮತ್ತೊಂದೆಡೆ ಸಂಸದ ಡಿ.ಕೆ. ಸುರೇಶ್ ನನ್ನ ಬಗ್ಗೆ ಇಲ್ಲಸಲ್ಲದನ್ನು ಹೇಳಿ ಕಪ್ಪು ಚುಕ್ಕೆ ತರಲು ಪ್ರಯತ್ನಿಸಿ, ಅಸಂಬದ್ಧ ಹೇಳಿಕೆಗಳನ್ನು ಕೊಡುತ್ತಿರುತ್ತಾರೆ. ಡಿ.ಕೆ. ಸುರೇಶ್ ಭ್ರಮ ನಿರಸನರಾಗಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಬೆಳೆದಿದೆ. ಹೊಸ ಶಕ್ತಿ ಬರುತ್ತಿದೆ. ಆದರೆ ಇವರು ಮುಂದೆ ಸರ್ಕಾರ ಬರುತ್ತದೆ ಅಂತ ಡ್ರೆಸ್ ಹೊಲಿಸಿಕೊಂಡಿದ್ದರು. ಅದು ತಪ್ಪುತ್ತೆ ಅನ್ನೋ ಆತಂಕದಲ್ಲಿ ಈಗ ನನ್ನ ಬಗ್ಗೆ ಏನೇನೋ ಮಾತಾಡುತ್ತಿದ್ದಾರೆ. ನಾನು ಡಿ.ಕೆ. ಸುರೇಶ್ ಬದಲು ಕೇಡಿ ಸುರೇಶ್ ಅಂತ ಹೇಳಬಹುದಲ್ವಾ ಎಂದು ಟಾಂಗ್ ಕೊಟ್ಟಿದ್ದಾರೆ.
ಸಿಎಂ ಯಡಿಯೂರಪ್ಪ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ನಾನೇನು ಮಾತನಾಡಲ್ಲ. ಅವರು ಹಿರಿಯರು, ಸಿಎಂ ಅವರೇ ಸ್ವತಃ ಸ್ಪಷ್ಟಪಡಿಸುತ್ತಾ, ಹೋಗುತ್ತಿದ್ದಾರೆ. ನಾನು ನಿನ್ನೆ ಮೊನ್ನೆ ಕೂಡ ಗಮಿನಿಸಿದ್ದೇನೆ ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ರಾಜೀನಾಮೆ ವಿಷಯ ಪ್ರಸ್ತಾಪಿಸಿದ್ದಾರೆ. ಹಾಗಾಗಿ ಈ ವಿಚಾರದಲ್ಲಿ ನನ್ನದೇನು ವೈಯಕ್ತಿಕ ಅಭಿಪ್ರಾಯ ಇಲ್ಲ ಎಂದಿದ್ದಾರೆ.
ಈ ಮೊದಲು ನಾನು ನನ್ನ ಜಿಲ್ಲೆಯ ಸಮಸ್ಯೆಗಳ ಬಗ್ಗೆ ತೊಂದರೆಗಳ ಬಗ್ಗೆ ಮಾತಾಡಿದ್ದೆ ಹೊರತು ನಾಯಕತ್ವ ಬದಲಾವಣೆ ಬಗ್ಗೆ ಮಾತಾಡಿಲ್ಲ. ಸಿಎಂ ಬದಲವಾಣೆ ರಾಜೀನಾಮೆ ಬಗ್ಗೆ ನಮ್ಮ ವರಿಷ್ಠರು ಹಾಗೂ ಹಿರಿಯರು ಆ ಬಗ್ಗೆ ಮಾತನಾಡಲಿದ್ದಾರೆ ಎಂದರು. ಜೊತೆಗೆ ಕಾಂಗ್ರೆಸ್ಸಿನಿಂದ ಬಂದ ವಲಸಿಗ ಸಚಿವರಿಗೆ ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿ ಬಗ್ಗೆ ಮಾತನಾಡಿದ ಅವರು, ಮಂತ್ರಿ ಸ್ಥಾನ ಶಾಶ್ವತನಾ..? ಸೇವೆ ಮಾಡಲು ಅವಕಾಶ ಸಿಕ್ಕಾಗ ಮಾಡಬೇಕು ಅಷ್ಟೆ. ರಾಜೀನಾಮೆ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಯಡಿಯೂರಪ್ಪ ರಾಜೀನಾಮೆ ವಿಚಾರ ಸಂಬಂಧ ಮೌನವೇ ಉತ್ತರವಾಗಿತ್ತು. ಇದನ್ನೂ ಓದಿ:ನನ್ನ ಫೋನ್ಗಳನ್ನು ಕದ್ದಾಲಿಕೆ ಮಾಡಲಾಗಿದೆ: ರಾಹುಲ್ ಗಾಂಧಿ