– ಇದು ಕಾಂಗ್ರೆಸ್ ಹೀನಾಯ ಸ್ಥಿತಿ ಪ್ರದರ್ಶನ
ಮೈಸೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ಹುಲಿಯಂತೆ ಅಬ್ಬರಿಸುತ್ತಿದ್ದರು. ಆದ್ರೆ ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಿದ್ದರಾಮಯ್ಯರನ್ನ ಬೋನಿನಲ್ಲಿ ಕೂಡಿ ಹಾಕಿದರು ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ವ್ಯಂಗ್ಯ ಮಾಡಿದ್ದಾರೆ.
ಮೈಸೂರು ಪಾಲಿಕೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಅಧಿಕಾರದ ಸನಿಹದಲ್ಲಿ ಬಿಜೆಪಿ ಗದ್ದುಗೆಯಿಂದ ವಂಚಿತವಾಯ್ತು. ಚುನಾವಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಕೊನೆ ಕ್ಷಣದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿ ಶಾಂತಕುಮಾರಿ ಅವರಿಗೆ ಮತ ಹಾಕದೇ ಮೋಸ ಮಾಡಿದೆ. ಹಿರಿಯರಾಗಿರುವ ಶಾಂತಕುಮಾರಿಗೆ ಕಾಂಗ್ರೆಸ್ ದ್ರೋಹ ಮಾಡಿದೆ. ಇವತ್ತಿನ ಘಟನೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪತನವಾಗುವ ಮುನ್ಸೂಚನೆ ಎಂದು ಭವಿಷ್ಯ ನುಡಿದರು.
ನಾವು ಸಹಕಾರ ಕೇಳಿದ್ದೀವಿ. ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಕುಮಾರಸ್ವಾಮಿ ಅವರನ್ನ ಭೇಟಿ ಮಾಡಿ ಸಹಕಾರ ಕೇಳಿದ್ದೀವಿ, ಆದ್ರೆ ಸಿಗಲಿಲ್ಲ. ಹಾಗಾಗಿ ನಮ್ಮ ಅಭ್ಯರ್ಥಿಯನ್ನ ಕಣಕ್ಕಿಳಿಸಿದ್ದೀವಿ. ಚುನಾವಣೆಯಲ್ಲಿ ಗೆಲ್ಲಲು ನಾವು ಸಹ ಪ್ರಯತ್ನಿಸಿದ್ದು, ನಮ್ಮ ಮತಗಳು ನಮ್ಮಲ್ಲಿವೆ. ಆದರೆ ಸಂಖ್ಯೆಯ ದೃಷ್ಟಿಯಲ್ಲಿ ಫಲ ಕೊಡಲಿಲ್ಲ. ಹಾಗಂತ ನಮಗೆ ಯಾವುದೇ ಬೇಸರ ಇಲ್ಲ ಎಂದರು.
ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಬೆಂಬಲದಿಂದ ರುಕ್ಮಿಣಿ ಮಾದೇಗೌಡರು ಮೇಯರ್ ಮತ್ತು ಕಾಂಗ್ರೆಸ್ಸಿನ ಅನ್ವರ್ ಬೇಗ್ ಆಯ್ಕೆಯಾದರು. ಇಂದು ಬೆಳಗ್ಗೆ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದ ಕುಮಾರಸ್ವಾಮಿ, ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳುತ್ತಿಲ್ಲ. ಎರಡು ಪಕ್ಷಗಳಿಂದ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಇಂದಿನ ಸ್ಥಿತಿಗೆ ಸಿದ್ದರಾಮಯ್ಯ ಕಾರಣ ಎಂದು ವಾಗ್ದಾಳಿ ನಡೆಸಿದ್ದರು.