– ಬರ್ತ್ ಡೇ ಆಚರಣೆಗೆ ಹೋಗಿದ್ದಾಗ ಘಟನೆ
ಶಿವಮೊಗ್ಗ: ಹುಟ್ಟುಹಬ್ಬ ಆಚರಿಸಲೆಂದು ಸ್ನೇಹಿತರ ಜೊತೆ ತೆರಳಿದ್ದ ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯೆಯ ಪುತ್ರ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.
ಅತೀಶ್ (24) ಮೃತ ಯುವಕ. ಮೃತಪಟ್ಟ ಯುವಕನನ್ನು ಶಿವಮೊಗ್ಗ ಮಹಾನಗರ ಪಾಲಿಕೆಯ ಜಯನಗರ ವಾರ್ಡಿನ ಬಿಜೆಪಿ ಸದಸ್ಯೆ ಆರತಿ ಪ್ರಕಾಶ್ ಅವರ ಪುತ್ರ ಎಂದು ಗುರುತಿಸಲಾಗಿದೆ. ಅತೀಶ್ ಹುಟ್ಟುಹಬ್ಬದ ಸಂಭ್ರಮದಂದೇ ಮೃತಪಟ್ಟಿದ್ದಾನೆ.
ಶುಕ್ರವಾರ ಅತೀಶ್ ಹುಟ್ಟುಹಬ್ಬ ಆಚರಣೆ ಹಿನ್ನೆಲೆಯಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ನಗರದ ಹೊರವಲಯದ ರಾಮಿನಕೊಪ್ಪ ಸಮೀಪದ ಹಾಯ್ ಹೊಳೆ ನಾಲೆ ಬಳಿ ತೆರಳಿದ್ದನು. ಈ ವೇಳೆ ನಾಲೆಯಲ್ಲಿ ಈಜಲು ಹೋದ ಅತೀಶ್ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ.
ತಕ್ಷಣ ಸ್ನೇಹಿತರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಸತತ ಕಾರ್ಯಾಚರಣೆ ನಂತರ ಯುವಕನ ಮೃತದೇಹ ಪತ್ತೆಯಾಗಿದೆ. ಈ ಘಟನೆ ಸಂಬಂಧ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.