ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್ ಚಾಪ್ಟರ್ -2’ ಸಿನಿಮಾಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಕೆಜಿಎಫ್ ಅಂಗಳದಿಂದ ಸ್ವಾತಂತ್ರ್ಯ ದಿನಾಚರಣೆಯಂದು ಅಭಿಮಾನಿಗಳಿಗೆ ಒಂದು ಗುಡ್ನ್ಯೂಸ್ ಸಿಕ್ಕಿದೆ. ಇದನ್ನೂ ಓದಿ: ಕೆಜಿಎಫ್ ಅಧೀರನಿಗೆ ಕ್ಯಾನ್ಸರ್- ಶೀಘ್ರ ಚಿಕಿತ್ಸೆಗೆ ಅಮೆರಿಕಕ್ಕೆ ಹಾರಿದ ಸಂಜಯ್ ದತ್
ಇತ್ತೀಚೆಗಷ್ಟೆ ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಅವರು ಸಿನಿಮಾ ಕುರಿತು ಶೀಘ್ರದಲ್ಲೆ ಅಪ್ಡೇಟ್ ನೀಡುವುದಾಗಿ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಇಂದು ಯಶ್ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ತುಣುಕನ್ನು ಶೇರ್ ಮಾಡಿಕೊಳ್ಳುವ ಮೂಲಕ ಸಿನಿಮಾದ ಅಪ್ಡೇಟ್ ಏನೆಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಯಶ್ ಶೇರ್ ಮಾಡಿರುವ ವಿಡಿಯೋದಲ್ಲಿ ಇದೇ 17 ರಂದು ಅಂದರೆ ಸೋಮವಾರ ಸಿನಿಮಾದ ಹೀರೋ ಅಲ್ಲ. ವಿಲನ್ ಬರುತ್ತಿದ್ದಾರೆ ಎಂದು ಹೇಳಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಕೂಡ “ಹೀರೋ ಅಲ್ಲ, ವಿಲನ್ ಬರುತ್ತಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸೋಮವಾರ ಕೆಜಿಎಫ್ ಸಿನಿಮಾದ ಖಳನಟನ ಪೋಸ್ಟರ್ ರಿಲೀಸ್ ಮಾಡುವ ಸಾಧ್ಯತೆ ಇದೆ.
https://www.instagram.com/p/CD5mThZHPKm/?igshid=1ffhhnknmgvsb
‘ಕೆಜಿಎಫ್-1’ ಧೂಳೆಬ್ಬಿಸಿದ ಬಳಿಕ ಬಹುನಿರೀಕ್ಷಿತ ‘ಕೆಜಿಎಫ್-2’ ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಯಶ್ ಅಭಿನಯದ ಈ ಚಿತ್ರ ಭಾರೀ ನಿರೀಕ್ಷೆ ಮೂಡಿಸಿದ್ದು, ದೇಶ ವಿದೇಶಗಳಲ್ಲಿ ಚಿತ್ರದ ಕುರಿತು ಕುತೂಹಲ ಹೆಚ್ಚಿದೆ. ಬಾಲಿವುಡ್ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರು ಚಿತ್ರ ತಂಡ ಸೇರಿರುವುದು ಇನ್ನೂ ಕುತೂಹಲಕ್ಕೆ ಕಾರಣವಾಗಿದೆ. ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.