– ಲಾಕ್‍ಡೌನ್ ಸಂಪೂರ್ಣ ವಿಫಲವಾಗಿದೆ
ನವದೆಹಲಿ: ಲಾಕ್‍ಡೌನ್ ವಿಫಲವಾದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಿಂದೆ ಸರಿದಿದ್ದು, ಈ ನಡುವೆ ಅವರು ಎಲ್ಲೂ ಮುನ್ನೆಲೆಯಲ್ಲಿ ಕಾಣುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಕುಟುಕಿದ್ದಾರೆ. ಲಾಕ್‍ಡೌನ್ ಅವಧಿಯಲ್ಲಿ ಸರಣಿ ಸುದ್ದಿಗೋಷ್ಠಿ ನಡೆಸುತ್ತಿರುವ ಅವರು, ಇಂದಿನ ಸುದ್ದಿಗೋಷ್ಠಿಯಲ್ಲೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಭಾರತದಲ್ಲಿ ಲಾಕ್‍ಡೌನ್ ಸಂಪೂರ್ಣ ವಿಫಲವಾಗಿದೆ. ಲಾಕ್‍ಡೌನ್ ಬಳಿಕವೂ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಏಕೈಕ ದೇಶ ಭಾರತ. ಇಲ್ಲಿ ಲಾಕ್‍ಡೌನ್ ಗುರಿ ಮತ್ತು ಉದ್ದೇಶ ಈಡೇರದೆ ವಿಫಲವಾಗಿದೆ. ವಿಫಲವಾದ ಲಾಕ್‍ಡೌನ್ ಫಲಿತಾಂಶವನ್ನು ಸದ್ಯ ಭಾರತ ಎದುರಿಸುತ್ತಿದ್ದು, ಸೋಂಕಿನ ಪ್ರಮಾಣ ಗಣನೀಯ ಏರಿಕೆ ಕಾಣುತ್ತಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
Advertisement
Advertisement
ಲಾಕ್‍ಡೌನ್ ಆರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುನ್ನೆಲೆಯಲ್ಲಿದ್ದರು ಲಾಕ್‍ಡೌನ್ ವಿಫಲವಾಗುತ್ತಿದ್ದಂತೆ ಹಿನ್ನಲೆಗೆ ಸರಿದಿದ್ದಾರೆ. ವಿಪಕ್ಷವಾಗಿ ನಾವು ಅವರಿಗೆ ಮನವಿ ಮಾಡುತ್ತೇವೆ ಮತ್ತೆ ದೇಶದ ಮುನ್ನೆಲೆಗೆ ಬಂದು ಮಾತನಾಡಬೇಕು. ಲಾಕ್‍ಡೌನ್ ಬಳಿಕ ಸರ್ಕಾರದ ಮುಂದಿನ ನಡೆ ಏನು ಎಂದು ಸ್ಪಷ್ಟಪಡಿಸಬೇಕು. ಲಾಕ್‍ಡೌನ್ ವಿಫಲವಾಗಿದೆ ಸರ್ಕಾರದ ನಿರ್ಧಾರ ಏನು ಎನ್ನುವುದು ಜನರಿಗೆ ತಿಳಿಸಬೇಕು ಎಂದು ಆಗ್ರಹಿಸಿದರು.
Advertisement
Advertisement
ಕೇಂದ್ರ ಸರ್ಕಾರದ ಇಪ್ಪತ್ತು ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ನಿಂದ ಏನು ಲಾಭ ಇಲ್ಲ. ಆರ್ಥಿಕ ಚೇತರಿಕೆಗೆ ನಗದು ಹಣ ವರ್ಗಾವಣೆ ಮಾಡದೆ ಬೇರೆ ಪರಿಹಾರ ಇಲ್ಲ. ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಬಲಿಷ್ಠಗೊಳಿಸಿ. ಶೇ.50 ಬಡ ಜನರಿಗೆ 7,500 ಹಣ ವರ್ಗಾವಣೆ ಮಾಡಿ ಇಲ್ಲದಿದ್ದರೆ ದೊಡ್ಡ ಆರ್ಥಿಕ ಮುಗ್ಗಟ್ಟು ದೇಶ ಎದುರಿಸಲಿದೆ ಎಂದು ಎಚ್ಚರಿಸಿದರು.
ವಿದೇಶಗಳ ಬಗ್ಗೆ ಸರ್ಕಾರ ಯೋಚನೆ ಮಾಡವುದಲ್ಲ, ನಾವು ಮೊದಲು ನಮ್ಮ ದೇಶದ ಜನರನ್ನು ರಕ್ಷಿಸಬೇಕು. ಬಡವರು ಬದುಕು ಕಟ್ಟಿಕೊಳ್ಳಲು ಸರ್ಕಾರ ಏನು ಮಾಡಲಿದೆ ತಿಳಿಸಲಿ. ಕೊರೊನಾ ಹೋರಾಟಕ್ಕೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ನೆರವು ಸಿಗುತ್ತಿಲ್ಲ. ಆರ್ಥಿಕ ಪ್ಯಾಕೇಜ್‍ನ ಅವಶ್ಯಕತೆ ಇದೆ ಆದರೆ ಮೋದಿ ಸರ್ಕಾರ ಈ ಮನವಿ ಪರಿಗಣಿಸುತ್ತಿಲ್ಲ. ಇದು ಮತ್ತಷ್ಟು ಸಂಕಷ್ಟಕ್ಕೆ ಕಾರಣವಾಗಲಿದೆ. ಕೊರೊನಾ ನಿಯಂತ್ರಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಾನು ಮಾರ್ಕ್ಸ್ ನೀಡುವುದಿಲ್ಲ, ಮಾರ್ಕ್ಸ್ ನೀಡಲು ನಾನು ಪ್ರೊಫೆಸರ್ ಅಲ್ಲ ಎಂದು ಪ್ರಶ್ನೆಗೆ ಉತ್ತರಿಸಿದರು.