ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಜನ ಹಿಂದೂ ವಿರೋಧಿ ರಾಜನೀತಿ ವಿರುದ್ಧ ವೋಟ್ ಹಾಕುತ್ತಿದ್ದಾರೆ ಎಂದು ಸಂಸದ ಮತ್ತು ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಹೈದರಾಬಾದ್ ಮಹಾನಗರ ಪಾಲಿಕೆ ಫಲಿತಾಂಶದಲ್ಲಿ ಬಿಜೆಪಿ ಸಾಧನೆಯ ಬಗ್ಗೆ ಪಬ್ಲಿಕ್ ಟಿವಿಯ ಜೊತೆ ಮಾತನಾಡಿದ ಅವರು, ಜನರ ಇತ್ತೀಚಿನ ದಿನಗಳಲ್ಲಿ ಮೂರು ವಿಚಾರಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ವೋಟ್ ಮಾಡುತ್ತಿದ್ದಾರೆ. ಜನರು ಕುಟುಂಬ ಆಧಾರಿತ ರಾಜಕಾರಣ, ಭ್ರಷ್ಟ ಆಡಳಿತ ಮತ್ತು ಹಿಂದೂ ವಿರೋಧಿ ರಾಜನೀತಿ ವಿರುದ್ಧ ವೋಟ್ ಮಾಡುತ್ತಾರೆ ಎಂದು ಹೇಳಿದ್ದಾರೆ.
ಈ ಚುನಾವಣೆಯ ಫಲಿತಾಂಶ ನನಗೆ ಸಂತೋಷ ನೀಡಿದೆ. 4 ಸ್ಥಾನದಿಂದ 40 ಸ್ಥಾನ ದಾಟಿದ್ದೇವೆ. ಹತ್ತು ಪಟ್ಟು ಫಲಿತಾಂಶ ಹೆಚ್ಚಾಗಿದೆ. ಈ ಸಾಧನೆ ಬಿಜೆಪಿ ಮೇಲೆ, ಮೋದಿಯವರ ಅಭಿವೃದ್ಧಿ ಕಾರ್ಯಗಳ ಮೇಲೆ ಜನ ನಂಬಿಕೆ ಇಟ್ಕೊಂಡಿರೋದನ್ನು ತೋರಿಸುತ್ತೆ. ಈ ಹೈದರಾಬಾದ್ ಮಹಾನಗರ ಪಾಲಿಕೆಯ ಫಲಿತಾಂಶ ಮುಂಬರುವ ದಿನಗಳಲ್ಲಿ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಎಂಬ ಸುಳಿವು ಕೊಟ್ಟಿದೆ ಎಂದು ತಿಳಿಸಿದರು.
ಇದು ಪಕ್ಷದ ಕಾರ್ಯಕರ್ತರ ಜಯ. ಕೆಸಿಆರ್ ಸಾಕಷ್ಟು ಕೇಸ್‍ಗಳನ್ನು ಹಾಕಿದರೂ ನಮ್ಮ ಕಾರ್ಯಕರ್ತರು ಶ್ರಮ ಹಾಕಿ ಕೆಲಸ ಮಾಡಿದ್ದಾರೆ. ಪ್ರತೀ ಚುನಾವಣೆಯಲ್ಲೂ ನಮ್ಮ ಪರ ಜನಬೆಂಬಲ ಹೆಚ್ಚಾಗುತ್ತಿದೆ. ಹೈದರಾಬಾದ್‍ಗೆ ಭಾಗ್ಯನಗರ ಎಂದು ಹೆಸರಿಡುವ ಮತ್ತು ನಿಜಾಮ ಸಂಸ್ಕೃತಿ ಅಂತ್ಯ ಮಾಡುವ ನಮ್ಮ ಭರವಸೆಗಳನ್ನು ಅಲ್ಲಿನ ಜನ ಬೆಂಬಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ನಮಗೆ ಸಹಾಯಕವಾಗಲಿದೆ ಎಂದು ಸೂರ್ಯ ಭವಿಷ್ಯ ನುಡಿದಿದ್ದಾರೆ.
ಇದೇ ವೇಳೆ ಬಿಬಿಎಂಪಿ ಚುನಾವಣೆಗೆ ವೇಳಾಪಟ್ಟಿ ಹೊರಡಿಸಲು ಹೈಕೋರ್ಟ್ ನಿರ್ದೇಶನ ವಿಚಾರವಾಗಿ ಮಾತನಾಡಿ, ಬೆಂಗಳೂರಿಗೆ ವಿಶೇಷ ಕಾನೂನು ಬೇಕು. ಎಲ್ಲ ಸಮಸ್ಯೆಗಳಿಗೂ ವಿಶೇಷ ಕಾನೂನಿನಿಂದ ಪರಿಹಾರ ಸಿಗಬೇಕು. ಬಿಬಿಎಂಪಿಗೆ ಚುನಾವಣೆ ಯಾವಾಗ ಬಂದರೂ ಸರ್ಕಾರ ಸಿದ್ಧವಿದೆ. ಚುನಾವಣೆಯಲ್ಲಿ ಗೆಲ್ಲೋದು ಬಿಜೆಪಿಯೇ. ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡುವ ಬಗ್ಗೆ ಸಿಎಂ ಮತ್ತು ಸಚಿವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಚುನಾವಣೆ ಯಾವಾಗ ಬಂದರೂ ನಾವು ಸಿದ್ಧ ಎಂದರು.
ಹೈದರಾಬಾದಿಗೆ ತೆರಳಿ ಪ್ರಚಾರ ನಡೆಸಿದ್ದ ತೇಜಸ್ವಿ ಸೂರ್ಯ, ಅಸಾದುದ್ದಿನ್ ಓವೈಸಿ ಮೊಹಮ್ಮದ್ ಅಲಿ ಜಿನ್ನಾನ ಅವತಾರವಾಗಿದ್ದು, ಅವರ ಪಕ್ಷಕ್ಕೆ ಹಾಕುವ ಪ್ರತಿಯೊಂದು ಮತ ದೇಶದ ವಿರುದ್ಧವಾಗಿದೆ ಎಂದು ಗುಡುಗಿದ್ದರು.