ಉಡುಪಿ: ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿದೆ ಎಂಬ ಆರೋಪಕ್ಕೆ ಆರನೇ ತರಗತಿಯ ಒಂದು ಪಾಠಕ್ಕೆ ಸರ್ಕಾರ ಕತ್ತರಿ ಹಾಕಲು ನಿರ್ಧರಿಸಿದೆ. ಸಮಾಜಶಾಸ್ತ್ರ ಪಠ್ಯದಲ್ಲಿ ಹಿಂದೂ ಧಾರ್ಮಿಕ ನಂಬಿಕೆಗೆ ಘಾಸಿಯಾಗುವ ಅಂಶಗಳಿವೆ. ಅದು ಸತ್ಯಕ್ಕೆ ದೂರವಾದದ್ದು ಎಂಬ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಪಾಠವನ್ನು ಕೈ ಬಿಡಲು ಶಿಕ್ಷಣ ಸಚಿವರು ಆದೇಶ ನೀಡಿದ್ದಾರೆ.
ಧಾರ್ಮಿಕ ಭಾವನೆಗೆ ಧಕ್ಕೆಯಾಗುವ ಅಂಶಗಳನ್ನು ಮಕ್ಕಳಿಗೆ ಪಠ್ಯ ಬೋಧಿಸುವುದು ಎಷ್ಟು ಸರಿ ಅನ್ನೊ ವಿಚಾರ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗಿತ್ತು. ಉಡುಪಿಯ ಅದಮಾರು ಮಠದ ಪರ್ಯಾಯ ಈಶಪ್ರಿಯ ತೀರ್ಥ ಸ್ವಾಮೀಜಿ ಆಡಿಯೋ ಮೂಲಕ ತಮ್ಮ ಅಭಿಪ್ರಾಯವನ್ನೂ ವ್ಯಕ್ತಪಡಿಸಿದ್ದರು.
Advertisement
Advertisement
ವಿವಾದಕ್ಕೆ ಕಾರಣವಾದ ಪಠ್ಯದ ಸಾರಾಂಶ:
ಕೈ ಬಿಟ್ಟ ಪಾಠದಲ್ಲಿ ಉತ್ತರ ವೇದ ಕಾಲದಲ್ಲಿ ವೈದಿಕ ಆಚರಣೆಗಳಾದ ಯಾಗ-ಯಜ್ಞಗಳ ಹೆಸರಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಇದರಿಂದ ಆಹಾರದ ಉತ್ಪಾದನೆ ಕುಂಠಿತವಾಯ್ತು. ಯಾಗಗಳಿಗೆ ಆಹಾರ ಧಾನ್ಯ- ಹಾಲು- ತುಪ್ಪಗಳನ್ನು ಹಾಕಿದ ಪರಿಣಾಮ ಆಹಾರದ ಅಭಾವವೂ ಉಂಟಾಯ್ತು. ಯಾಗ ಯಜ್ಞಗಳಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ನಂಬಿಕೆ ಜನರಲ್ಲಿ ಮನೆ ಮಾಡಿತ್ತು. ಸಂಸ್ಕೃತವೆಂಬ ಪುರೋಹಿತ ಭಾಷೆಯಲ್ಲಿ ಈ ಆಚರಣೆಗಳು ನಡೆಯುತ್ತಿದ್ದು ಜನ ಸಾಮಾನ್ಯರಿಗೆ ಇದು ಅರ್ಥವಾಗುತ್ತಿರಲಿಲ್ಲ.
Advertisement
ಸರಳ ಮಾರ್ಗಗಳ ಮೂಲಕ ಮುಕ್ತಿ ಹೊಂದಲು ಹೊಸ ಧರ್ಮವನ್ನು ಜನ ಅಪೇಕ್ಷಿಸುತ್ತಿದ್ದರು ಎಂದು ಈ ಪಠ್ಯದಲ್ಲಿ ಹೇಳಲಾಗಿದೆ. ಅದಮಾರು ಶ್ರೀ ಈಶಪ್ರಿಯ ತೀರ್ಥರು ಈ ವಿಚಾರಗಳನ್ನು ಆಕ್ಷೇಪಿಸಿ, ಯಾಗಳಿಗೆ ಮಹತ್ವ ಇತ್ತಾದರೂ, ಅದಕ್ಕೂ ಒಂದು ನಿಯಮ ಇತಿಮಿತಿಗಳಿತ್ತು. ಈ ಕುರಿತು ಭಾಗವತದಲ್ಲಿ ಉಲ್ಲೇಖವಿದೆ. ಎಲ್ಲಾ ಸಾಧಕರಿಗೂ ಯಾಗದಿಂದಲೇ ಮುಕ್ತಿ ಎಂಬ ಅಭಿಪ್ರಾಯ ಇರಲಿಲ್ಲ. 5 ಸಾವಿರ ವರ್ಷಗಳ ಹಿಂದೆ ಬಂದ ಭಾಗವತದಲ್ಲಿಯೇ ಹೀಗೆ ಹೇಳಲಾಗಿದೆ. ಹಾಗಾಗಿ ಪಠ್ಯದಲ್ಲಿರುವ ಮಾತು ಸರಿಯಲ್ಲ ಎಂದು ಆಡಿಯೋದಲ್ಲಿ ತಿಳಿಸಿದ್ದರು. ಇದು ಶಿಕ್ಷಣ ಸಚಿವರ ಕೈಸೇರಿತ್ತು.
Advertisement
ಇದೀಗ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆ ಪಠ್ಯವನ್ನೇ ಕೈ ಬಿಡೋದಾಗಿ ಹೇಳಿದ್ದಾರೆ. ಸಚಿವರು ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಈ ಪಾಠ ಪುಸ್ತಕ ಈ ವರ್ಷ ಪ್ರಕಟವಾಗಿದ್ದಲ್ಲ, ಆದರೂ ಈ ವರ್ಷ ಈ ಪಾಠವನ್ನು ಮಾಡದಿರುವಂತೆ ಆದೇಶ ಮಾಡುತ್ತೇನೆ. ಮುಂದಿನ ವರ್ಷ ಪಠ್ಯ ಪುಸ್ತಕ ಪ್ರಕಟವಾಗುವಾಗ ಈ ಪಾಠ ತೆಗೆಸುತ್ತೇನೆ. ಈಗಾಗಲೇ ಪಠ್ಯ ಮುದ್ರಣವಾಗಿ ಮಕ್ಕಳಿಗೆ ತಲುಪಿದೆ. ಹಾಗಾಗಿ ಪಠ್ಯದಿಂದ ಹೊರತೆಗೆಯುವ ಮಾರ್ಪಾಡು ಮಾಡುವ ಹಾಗಿಲ್ಲ. ಈ ಬಗ್ಗೆ ವಿಷಾದವಿದೆ ಎಂದು ತಿಳಿಸಿದ್ದಾರೆ. ಹೊಸ ಧರ್ಮ ಉದಯದ ಬಗೆಗಿನ ವಿಚಾರ ಪಠ್ಯದಲ್ಲಿ ಮುಂದೆ ಮುದ್ರಣ ಆಗುತ್ತೋ ಇಲ್ಲವೋ ಎಂಬ ಬಗ್ಗೆ ಗೊಂದಲ ಇದೆ.