ಹಾಸನ: ಕೊರೊನಾ ಸಮುದಾಯಕ್ಕೆ ಹರಡುತ್ತಿರುವ ಆತಂಕ ಎದುರಾಗಿದ್ದು ಜಿಲ್ಲೆಯಾದ್ಯಂತ 15 ದಿನ ಸಲೂನ್ ಬಂದ್ ಮಾಡಲು ಸವಿತಾ ಸಮಾಜದವರು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರವಿಕುಮಾರ್, ನಾವು ನಮ್ಮ ಸಮಾಜದ ಪದಾಧಿಕಾರಿಗಳು, ತಾಲೂಕು ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ಕೊರೊನಾ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚೆ ನಡೆಸಿದ್ದೇವೆ. ಸಭೆಯಲ್ಲಿ ಇದೇ ಜುಲೈ 11 ರಿಂದ ಜುಲೈ 26 ರವರೆಗೆ ಜಿಲ್ಲೆಯ ಎಲ್ಲಾ ಸಲೂನ್‍ಗಳನ್ನು ಬಂದ್ ಮಾಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಕೊರೊನಾ ಸಮುದಾಯಕ್ಕೆ ಹರಡುವ ಲಕ್ಷಣ ಕಾಣುತ್ತಿದ್ದು, ಸೋಂಕಿತರು ಕೆಲವರು ಅದರ ಅರಿವಿಲ್ಲದೆ ಸಲೂನ್‍ಗೆ ಬರುವ ಸಾಧ್ಯತೆಯಿರುತ್ತದೆ. ಇದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗಲಿದೆ. ಆದ್ದರಿಂದ ಸಾರ್ವಜನಿಕರು ಮತ್ತು ಸಲೂನ್‍ನಲ್ಲಿ ಕರ್ತವ್ಯ ನಿರ್ವಹಿಸುವವರ ಅನುಕೂಲಕ್ಕಾಗಿ ಹದಿನೈದು ದಿನ ಹಾಸನ ಜಿಲ್ಲೆಯಲ್ಲಿ ಸಲೂನ್ ಬಂದ್ ಮಾಡುವುದಾಗಿ ರವಿಕುಮಾರ್ ಹೇಳಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಮ್ಮ ಕಷ್ಟವನ್ನು ಮನಗಂಡು ಇನ್ನೂ ಹೆಚ್ಚಿನ ಸಹಾಯವನ್ನು ನಮ್ಮ ಸಮುದಾಯದವರಿಗೆ ಮಾಡಬೇಕೆಂದು ಜಿಲ್ಲಾಧ್ಯಕ್ಷ ರವಿಕುಮಾರ್ ಮನವಿ ಮಾಡಿಕೊಂಡಿದ್ದಾರೆ.