ಹಾಸನ: ಇಡೀ ಜಗತ್ತೆ ಕೊರೊನಾದಿಂದ ತತ್ತರಿಸಿ ಹೋಗುತ್ತದ್ದರೆ ಹಾಸನದಲ್ಲಿ 85 ವರ್ಷದ ವೃದ್ಧ ದಂಪತಿ ಕೊರೊನಾ ಗೆದ್ದು ಬಂದಿದ್ದು, ನಾವು ಧೈರ್ಯವಾಗಿದ್ದರೆ ಏನೇ ಕಷ್ಟ ಎದುರಾದರೂ ಮಣಿಸಬಹುದು ಅಂತಾ ಗೆಲುವಿನ ನಗು ಬೀರುತ್ತಿದ್ದಾರೆ.
ಹಾಸನದ ದಾಸರಕೊಪ್ಪಲು ನಿವಾಸಿಗಳಾದ ಜಯರಾಮ್ ಮತ್ತು ಜಯಮ್ಮ ದಂಪತಿಗೆ ಕಳೆದ 15 ದಿನದ ಹಿಂದೆ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಯರಾಮ್ ಅವರಿಗೆ 85 ವರ್ಷ ವಯಸ್ಸಾಗಿದ್ದರೆ, ಜಯಮ್ಮ ಅವರಿಗೆ 75 ವರ್ಷ ವಯಸ್ಸಾಗಿತ್ತು. ಇದೀಗ ಕೊರೊನಾ ಗೆದ್ದು ಬಂದಿರುವ ಹಿರಿಯ ಜೋಡಿ ತಮ್ಮ ಅನುಭವವನ್ನು ಪಬ್ಲಿಕ್ ಟಿವಿಯೊಂದಿಗೆ ಹಂಚಿಕೊಂಡಿದ್ದಾರೆ.
ನಮಗೆ ಕೊರೊನಾ ಬಂದಾಗ ಬಹಳಷ್ಟು ಭಯ ಆಯ್ತು. ನಾನು ಎಲ್ಲಿದ್ದೇನೆ ಅಂತಾನೇ ಗೊತ್ತಾಗುತ್ತಿರಲಿಲ್ಲ. ಮಾತಾಡುವ ಶಕ್ತಿಯೂ ಇರಲಿಲ್ಲ. ಆಸ್ಪತ್ರೆಗೆ ಬಂದಾಗ ನಾನು ಎಲ್ಲಿದ್ದೇನೆ ಎಂದು ಕೇಳಿದ್ದೇನೆ. ಊಟದ ಮೇಲೆ ನಿಗಾ ಇರಲಿಲ್ಲ. ಆನಂತರ ಗೆದ್ದೇ ಗೆಲ್ಲುತ್ತೇವೆ ಎಂಬ ನಂಬಿಕೆ ಬಂದಿದ್ದರಿಂದ ಕೊರೊನಾ ಜಯಿಸಿದ್ದೇವೆ. ಕೊರೊನಾ ಬಗ್ಗೆ ಯಾವ ಆತಂಕವೂ ಬೇಡ. ಗೆಲ್ಲಲು ಧೈರ್ಯವೇ ಮಖ್ಯ ಕಾರಣ. ಈಗ ನಮಗೆ ತುಂಬಾ ಸಂತೋಷ ಆಗುತ್ತಿದೆ. ಆಸ್ಪತ್ರೆಯಲ್ಲೂ ಕೂಡ ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡರು ಎಂದು ಸಿಬ್ಬಂದಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.