-ಗರ್ಭಿಣಿ ಸೇರಿ ಮೂವರಲ್ಲಿ ಸೋಂಕು ದೃಢ
-ಜಿಲ್ಲೆಯಲ್ಲಿ 42ಕ್ಕೇರಿದ ಸೋಂಕಿತರ ಸಂಖ್ಯೆ
ಹಾವೇರಿ: ಜಿಲ್ಲೆಯಲ್ಲಿ ಇವತ್ತು ಮೂವರು ಮಹಿಳೆಯರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇಬ್ಬರ ಮಹಿಳೆಯರ ಟ್ರಾವೆಲ್ ಹಿಸ್ಟರಿ ಕಲೆ ಹಾಕಲು ಜಿಲ್ಲಾಡಳಿತ ಹರಸಾಹಸ ಮಾಡುತ್ತಿದೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದ 38 ವರ್ಷದ ಆಶಾ ಕಾರ್ಯಕರ್ತೆಗೂ (ರೋಗಿ 8,700) ಸೋಂಕು ತಗುಲಿದೆ.
ಸವಣೂರು ಪಟ್ಟಣದ 23 ವರ್ಷದ ಗರ್ಭಿಣಿಗೂ (ರೋಗಿ 8699) ಕೊರೊನಾ ದೃಢಪಟ್ಟಿದೆ. ಜೂನ್ 19 ರಂದು ಗರ್ಭಿಣಿಯ ಗಂಟಲು ದ್ರವದ ಮಾದರಿಯನ್ನು ಸಂಗ್ರಹಿಸಿ ಆರೋಗ್ಯ ಇಲಾಖೆ ಪರೀಕ್ಷೆಗೆ ಕಳುಹಿಸಿತ್ತು. ಇಂದು ಬಂದ ವರದಿಯಲ್ಲಿ ಸೋಂಕು ತಗುಲಿರೋದು ಖಚಿತವಾಗಿದೆ.
ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿಯ ಕಂಟೈನ್ಮೆಂಟ್ ಜೋನ್‍ನ ನಿವಾಸಿ 45 ವರ್ಷದ ಮಹಿಳೆ (ರೋಗಿ- 8698)ಗೂ ಸೋಂಕು ತಗುಲಿದೆ. ಈ ಮಹಿಳೆ ರೋಗಿ 6832ರ ಸಂಪರ್ಕದಲ್ಲಿದ್ದರು. ಆಶಾ ಕಾರ್ಯಕರ್ತೆ ಹಾಗೂ ಗರ್ಭಿಣಿ ವಾಸವಾಗಿದ್ದ ಲಾಲಸಾಕಟ್ಟಿ ಖಾದರ ಬಾಗ್ ಓಣಿ ಯನ್ನ ಜಿಲ್ಲಾಡಳಿತ ಸೀಲ್‍ಡೌನ್ ಮಾಡಿದೆ. ಒಟ್ಟು ಹಾವೇರಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ.