ನವದೆಹಲಿ: ಬಾಕಿ ಉಳಿಸಿಕೊಂಡ ವಿದ್ಯುತ್ ಶುಲ್ಕವನ್ನು ಹೊಸ ಕಂಪನಿ ಪಾವತಿ ಮಾಡಬೇಕೇ? ಬೇಡವೇ? ಈ ಪ್ರಶ್ನೆಗೆ ಇಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ಪ್ರಕಟಿಸುವ ಮೂಲಕ ಉತ್ತರ ನೀಡಿದೆ.
ಪ್ರಕರಣ ಒಂದರ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾ. ಸಂಜಯ್ ಕಿಶನ್ ಮತ್ತು ನ್ಯಾ.ಕೆಎಂ ಜೋಸೆಫ್ ಅವರಿದ್ದ ದ್ವಿಸಸ್ಯ ಪೀಠ ಹೊಸ ಕಂಪನಿಯೇ ವಿದ್ಯುತ್ ಬಿಲ್ ಅನ್ನು ಪಾವತಿಸಬೇಕೆಂದು ಆದೇಶಿಸಿದೆ.
Advertisement
Advertisement
ಏನಿದು ಪ್ರಕರಣ?
ನಷ್ಟದಲ್ಲಿದ್ದ ತೆಲಂಗಾಣದ ಮಿನರಲ್ ಕಂಪನಿಯೊಂದನ್ನು ಮತ್ತೊಬ್ಬ ಮಾಲೀಕ ಖರೀದಿಸಿದ್ದರು. ಈ ವೇಳೆ ಮಾಲೀಕ ಹೊಸದಾಗಿ 500 ಕಿ.ವಾ ವಿದ್ಯುತ್ ಸಂಪರ್ಕ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಈ ಹಿಂದಿನ ಮಾಲೀಕ ವಿದ್ಯುತ್ ಬಿಲ್ ಪಾವತಿ ಮಾಡದ್ದಕ್ಕೆ ಹೊಸದಾಗಿ ಕಂಪನಿಗೆ ವಿದ್ಯುತ್ ಸಂಪರ್ಕ ನೀಡುವುದಿಲ್ಲ ಎಂದು ಹೇಳಿ ತೆಲಂಗಾಣ ಎಲೆಕ್ಟ್ರಿಸಿಟಿ ಬೋರ್ಡ್ ಅರ್ಜಿಯನ್ನು ತಿರಸ್ಕರಿಸಿತ್ತು.
Advertisement
ತನ್ನ ಬೇಡಿಕೆಯನ್ನು ಮನ್ನಿಸದ ಹಿನ್ನೆಲೆಯಲ್ಲಿ ಮಾಲೀಕರು ತೆಲಂಗಾಣ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್ ಮಾಲೀಕರ ಪರವಾಗಿ ತೀರ್ಪು ನೀಡಿತ್ತು. ಹೈಕೋರ್ಟ್ ನೀಡಿದ್ದ ಈ ಆದೇಶವನ್ನು ಪ್ರಶ್ನಿಸಿ ತೆಲಂಗಾಣ ಎಲೆಕ್ಟ್ರಿಸಿಟಿ ಬೋರ್ಡ್ ಸುಪ್ರೀಂ ಮೊರೆ ಹೋಗಿತ್ತು.
Advertisement
ಮಾಲೀಕನೇ ಪಾವತಿಸಬೇಕು ಯಾಕೆ?
ಈ ಪ್ರಕರಣದ ಮೂಲ ಮಾಲೀಕ ಸಾಲವನ್ನು ಪಾವತಿಸದ ಹಿನ್ನೆಲೆಯಲ್ಲಿ ಮಿನರಲ್ ಕಂಪನಿಯನ್ನು ಮಾರಾಟ ಮಾಡಲು ಸಿಂಡಿಕೇಟ್ ಬ್ಯಾಂಕ್ ಇ-ಹರಾಜು ಹಾಕಿತ್ತು. ಈ ವೇಳೆ ಈ ಕಂಪನಿ ಯಾವ ಸ್ಥಿತಿಯಲ್ಲಿದೆಯೇ ಆ ಸ್ಥಿತಿಯಲ್ಲೇ ಮಾರಾಟ ಮಾಡುತ್ತಿದ್ದೇವೆ. ಎಲ್ಲದ್ದಕ್ಕೂ ಹೊಸ ಮಾಲೀಕನೇ ಹೊಣೆಗಾರನಾಗುತ್ತಾನೆ ಎಂಬ ಅಂಶವನ್ನು ನೋಟಿಸ್ ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿತ್ತು.
ಅರ್ಜಿ ವಿಚಾರಣೆ ಸಂದರ್ಭದಲ್ಲಿ ಈ ಎಲ್ಲ ಅಂಶಗಳನ್ನು ಆಲಿಸಿದ್ದ ಪೀಠ ಕಂಪನಿಯ ಎಲ್ಲ ವಿವರಗಳು, ಉಲ್ಲೇಖಿಸಲ್ಪಟ್ಟ ವಿಚಾರಗಳನ್ನು ತಿಳಿದುಕೊಂಡು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಹಳೆಯ ಮಾಲೀಕ ಪಾವತಿಸದ ಕಾರಣಕ್ಕೆ ವಿದ್ಯುತ್ ಶುಲ್ಕವನ್ನು ಮನ್ನಾ ಮಾಡಲು ಸಾಧ್ಯವಿಲ್ಲ. ನೋಟಿಸ್‍ನಲ್ಲಿ ಉಲ್ಲೇಖಿಸಿದ್ದ ಕಂಪನಿಯನ್ನು ಯಥಾಸ್ಥಿತಿಯಲ್ಲಿ ಮಾರಾಟ ಮಾಡಲಾಗುತ್ತದೆ ಎಂಬ ಅಂಶವನ್ನೇ ಗಂಭೀರವಾಗಿ ಪರಿಗಣಿಸಿದ ಕೋರ್ಟ್ ತೆಲಂಗಾಣ ಹೈಕೋರ್ಟ್ ನೀಡಿದ ಆದೇಶವನ್ನು ರದ್ದುಗೊಳಿಸಿ ಹೊಸ ಕಂಪನಿಯ ಮಾಲೀಕನೇ ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಶುಲ್ಕವನ್ನು ಪಾವತಿಸಬೇಕು ಎಂದು ಮಹತ್ವದ ಆದೇಶ ಪ್ರಕಟಿಸಿತು.