ಡೆಹ್ರಾಡೂನ್: ಗುರುಪೂರ್ಣಿಮೆಯ ಪರ್ವ ದಿನವಾದ ಇಂದು ಕೇಂದ್ರದ ಮಾಜಿ ಸಚಿವೆ ಉಮಾಭಾರತಿ ಅವರು ಹರಿದ್ವಾರದಲ್ಲಿರುವ ಪೇಜಾವರ ಮಠದ ಶಾಖೆ ಮಧ್ವಾಶ್ರಮದಲ್ಲಿ ಗುರುಪೂಜೆ ನೆರವೇರಿಸಿದರು. ವೃಂದಾವನಸ್ಥ ಶ್ರೀ ವಿಶ್ವೇಶತೀರ್ಥರಲ್ಲಿ ಮಂತ್ರದೀಕ್ಷೆ ಪಡೆದ ಅವರು, ಶ್ರೀ ವಿಶ್ವೇಶತೀರ್ಥರ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ, ಭಕ್ತಿ ನಮನ ಸಲ್ಲಿಸಿದರು.
ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥರಿಗೆ ಗುರುಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು. ಶ್ರೀ ವಿಶ್ವೇಶತೀರ್ಥರು ಇದ್ದಷ್ಟು ಸಮಯ ಪ್ರತಿ ವರ್ಷ ಆಷಾಢ ಪೂರ್ಣಿಮೆಯಂದು ಅವರಿದ್ದಲ್ಲಿಗೆ ಬಂದು ಅಥವಾ ದೆಹಲಿಗೆ ಆಮಂತ್ರಿಸಿ ವಿಶೇಷ ಕಾರ್ಯಕ್ರಮ ನೆರವೇರಿಸಿ, ಉಮಾಭಾರತಿಯವರು ಗುರು ಭಕ್ತಿ ನಮನ ಸಲ್ಲಿಸುತ್ತಿದ್ದರು. ಈ ಬಾರಿ ಹರಿದ್ವಾರದ ಶಾಖಾ ಮಠದಲ್ಲಿ ಗುರುಗಳಿಗೆ ಭಕ್ತಿ ನಮನ ಅರ್ಪಿಸಿದರು.
Advertisement
Advertisement
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಚಿತ್ರಕೂಟ ಆಶ್ರಮದ ಶ್ರೀರಾಮಕಿಶನ್ ಮಹಾರಾಜ್ ಅವರಿಗೂ ಗುರುನಮನ ಅರ್ಪಿಸಿದ ಉಮಾಭಾರತಿ, ಅಲ್ಲಿನ ಹತ್ತಾರು ಸಾಧು ಸಂತರಿಗೂ ವಿಶೇಷ ಉಡುಗೊರೆ ನೀಡಿ ಗೌರವ ಸಲ್ಲಿಸಿದರು. ಗುರುಪೂರ್ಣಿಮೆಯ ಅಂಗವಾಗಿ ಆಶ್ರಮದಲ್ಲಿರುವ ಜಗದ್ಗುರು ಮಧ್ವಾಚಾರ್ಯರ ಶಿಲಾಪ್ರತಿಮೆಗೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ ವಿಶೇಷ ಅಭಿಷೇಕ ಪೂಜೆ ನೆರವೇರಿತು.
Advertisement
ಎರಡು ದಿನಗಳ ಹಿಂದೆ ಉಮಾಭಾರತಿಯವರ ಸಂಕಲ್ಪದಂತೆ ಆಶ್ರಮದಲ್ಲಿ ವಿದ್ವಾನ್ ಶಶಾಂಕ ಭಟ್ಟರ ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಯಾಗ ಸಂಪನ್ನಗೊಂಡಿತು. ಆಶ್ರಮದ ವ್ಯವಸ್ಥಾಪಕ ಮನೋಜ್ ಕಾರ್ಯಕ್ರಮ ಸಂಯೋಜಿಸಿದರು.
Advertisement
ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ 1992ರ ನವೆಂಬರ್ 17ರಂದು ನರ್ಮದಾ ನದಿಯ ಉಗಮಸ್ಥಳ ಮಧ್ಯಪ್ರದೇಶದ ಅಮರಕಂಟಕ್‍ನಲ್ಲಿ ಉಮಾಭಾರತಿಯವರಿಗೆ ಮಂತ್ರದೀಕ್ಷೆ ನೀಡಿದ್ದರು. ಆ ಕಾಲಕ್ಕೆ ಇಡೀ ದೇಶದಲ್ಲಿ ಈ ಘಟನೆ ಸಂಚಲನ ಮೂಡಿಸಿತ್ತು. ಬಳಿಕ ಪ್ರತಿ ವರ್ಷ ಉಮಾಭಾರತಿ ಗುರು ಪೂರ್ಣಿಮೆಯಂದು ತಮಗೆ ದೀಕ್ಷೆ ಕೊಟ್ಟ ಗುರುಗಳಿಗೆ ಗುರುವಂದನೆ ಸಲ್ಲಿಸುತ್ತಿದ್ದರು. ಪೇಜಾವರ ಶ್ರೀಗಳೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಉಮಾಭಾರತಿ, 2018ರಲ್ಲಿ ಪೇಜಾವರ ಶ್ರೀಗಳಿಗೆ ಅಪಘಾತವಾಗಿ ವಿಶ್ರಾಂತಿಯಲ್ಲಿದ್ದಾಗ ಉಡುಪಿಗೆ ಆಗಮಿಸಿ, ಆರೋಗ್ಯ ವಿಚಾರಿಸಿದ್ದರು.
ಶ್ರೀಗಳ ಅಂತಿಮ ದಿನಗಳಲ್ಲಿ ಅವರು ಮಣಿಪಾಲ ಆಸ್ಪತ್ರೆಯಲ್ಲಿದ್ದಾಗಲೂ ಉಡುಪಿಗೆ ಆಗಮಿಸಿದ ಉಮಾಭಾರತಿ, ನಾಲ್ಕೈದು ದಿನಗಳ ಕಾಲ ಉಡುಪಿ, ಆಸ್ಪತ್ರೆಯಲ್ಲಿಯೇ ಇದ್ದು ತಮ್ಮ ಗುರು ಭಕ್ತಿಯನ್ನು ಮೆರೆದಿದ್ದರು. ಪೇಜಾವರ ಶ್ರೀಗಳ ಸನ್ಯಾಸ ದೀಕ್ಷೆಯ 75ನೇ ವರ್ಧಂತಿಯನ್ನು ಉಮಾಭಾರತಿಯವರು ದೆಹಲಿಯಲ್ಲಿ ತಮ್ಮ ಮನೆಯಲ್ಲಿ ನಡೆಸಿದ್ದರು. 80ನೇ ವರ್ಧಂತಿಯನ್ನು ಉಡುಪಿಯಲ್ಲಿ ವಿಜ್ರಂಭಣೆಯಿಂದ ಮಾಡಬೇಕೆಂಬ ಮಹದಾಸೆ ಇತ್ತು. ಆ ಅಪೇಕ್ಷೆ ಮಾತ್ರ ಈಡೇರದೇ ಬಾಕಿ ಉಳಿಯಿತು. ಅತೀವ ನೋವು ಮನಸ್ಸಿನಲ್ಲಿ ಉಳಿದಿದೆ ಎಂದು ಈ ಸಂದರ್ಭದಲ್ಲಿ ಉಮಾಭಾರತಿ ನೆನಪಿಸಿಕೊಂಡರು.