ಕಾರವಾರ: ಕಾರವಾರ ನಗರಸಭೆ ವ್ಯಾಪ್ತಿಯಲ್ಲಿರುವ ಗುಡ್ಡೇಹಳ್ಳಿ ಅಧಿಕಾರಿಗಳ, ಜನ ಪ್ರತಿನಿಧಿಗಳ ದಿವ್ಯ ನಿರ್ಲಕ್ಷದಿಂದ ಮೂಲ ಸೌಕರ್ಯವಿಲ್ಲದೆ ಅನಾರೋಗ್ಯ ಪೀಡಿತ ರೋಗಿಗಳನ್ನು ಕರೆದೊಯ್ಯಲು ಜೋಳಿಗೆ ಹೊತ್ತು ಜನ ಪರದಾಡುತಿದ್ದಾರೆ.
ಈ ಗ್ರಾಮಕ್ಕೆ ಸಂಪರ್ಕಿಸುವ ದಾರಿ ತೀರಾ ಹದಗೆಟ್ಟಿದ್ದು, ವಾಹನ ಸಂಚಾರ ಸಾಧ್ಯವಿಲ್ಲದ ಕಾರಣ ಆಕಸ್ಮಿಕವಾಗಿ ಅನಾರೋಗ್ಯಕ್ಕೊಳಗಾಗುವ ಜನರನ್ನು ಬೆಡ್‍ಶೀಟ್ ಜೋಳಿಗೆಯಲ್ಲಿಯೇ ಹೊತ್ತು ತುರ್ತು ಚಿಕಿತ್ಸೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಇದೆ. ಇಂದು ಮಧ್ಯಾಹ್ನ ಅನಾರೋಗ್ಯಕ್ಕೆ ಒಳಗಾದ 64 ವರ್ಷದ ವೃದ್ಧ ಮಹಿಳೆಯೋಬ್ಬರನ್ನು ತುರ್ತು ಚಿಕಿತ್ಸೆಗೆ ಜೋಳಿಗೆಯಲ್ಲಿ ಹೊತ್ತು ತಂದು, ನಗರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಆಕೆಯನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕಳುಹಿಸಿಕೊಟ್ಟ ಘಟನೆ ನಡೆದಿದೆ.
Advertisement
Advertisement
ಎರಡು ದಿನ ಮುಂಚೆ ಅನಾರೋಗ್ಯದಿಂದ ಒದ್ದಾಡುತ್ತಿದ್ದ 23 ವರ್ಷದ ಯುವಕನೊಬ್ಬನನ್ನು ಇದೇ ರೀತಿ ಜೋಳಿಗೆಯಲ್ಲಿ ಹೊತ್ತು ತಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಆತನಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹೀಗೆ ವಯೋವೃದ್ಧರು ಸೇರಿದಂತೆ, ಯುವಕರು, ಮಹಿಳೆಯರು, ಮಕ್ಕಳು ಅನಾರೋಗ್ಯದಂತಹ ತುರ್ತು ಸ್ಥಿತಿಯಲ್ಲಿ ಜೋಳಿಗೆಯಲ್ಲಿಯೇ ಮಲಗಿಸಿ ಹೊತ್ತು ತರುವ ಅನಿವಾರ್ಯ ಸ್ಥಿತಿ ಇದೆ. ಈ ಪ್ರದೇಶ ನಗರಸಭೆ ವ್ಯಾಪ್ತಿಗೆ ಬಂದರೂ ಯಾವುದೇ ರೀತಿಯ ಮೂಲ ಸೌಕರ್ಯವನ್ನು ಒದಗಿಸಲಾಗಿಲ್ಲ.
Advertisement
ಪ್ರತಿ ದಿನ ನಗರಕ್ಕೆ ಬರಬೇಕೆಂದರೆ ಇಲ್ಲಿನ ಜನ ನಡೆದುಕೊಂಡೇ ಬರಬೇಕು. ಯಾವುದೇ ವಾಹನ ಸೌಕರ್ಯವಾಗಲಿ, ನಗರ ಸಾರಿಗೆಯಾಗಲಿ ಇಲ್ಲಿ ಇಲ್ಲ. ಇದ್ದ ಚಿಕ್ಕ ರಸ್ತೆಯೂ ಮಳೆಯಿಂದ ಕೊಚ್ಚಿಹೋಗಿದ್ದು, ಜನ ನರಳಾಟದ ಬದುಕು ನಡೆಸುವಂತಾಗಿದೆ. ನಗರಸಭೆಯವರು ಆದಷ್ಟು ಶೀಘ್ರ ಇಲ್ಲಿನ ರಸ್ತೆ ಸರಿಪಡಿಸಿ ಕೊಡುವಂತೆ ಅಳಲು ತೋಡಿಕೊಳ್ಳುತ್ತಾರೆ.
Advertisement
ನಗರದ ಬಿಣಗಾ ಹಾಗೂ ಹೈಚರ್ಚ್ ಸಮೀಪದಿಂದ ನೇರವಾಗಿ ಗುಡ್ಡೇಹಳ್ಳಿಗೆ ಕಾಡು-ಮೇಡುಗಳಿಂದ ಸುಮಾರು 8 ಕಿ.ಮೀ. ದೂರದ ಕಚ್ಚಾ ರಸ್ತೆ ಸಾಗಿದೆ. ಅಲ್ಲಿನ ಜನರು ಇದೇ ರಸ್ತೆಯ ಮೂಲಕವೇ ದಿನನಿತ್ಯದ ಕೆಲಸಕಾರ್ಯಕ್ಕಾಗಿ ಕಾರವಾರ-ಅಂಕೋಲಾ ಕಡೆಗೆ ಹೋಗಿ ಬರಬೇಕು. ಆದರೆ ಈ ರಸ್ತೆ ಮಾತ್ರ ತೀವ್ರ ಹದಗೆಟ್ಟಿದೆ. ಈ ರಸ್ತೆ ಮೂಲಕ ಹೋಗಿ ಬರಲು 17 ರಿಂದ 18 ಕಿಮೀ. ದೂರ ಕ್ರಮಿಸಬೇಕಾಗಿದೆ. ವಾಹನ ಸಂಚಾರ ಅಸಾಧ್ಯವಾಗಿರುವುದರಿಂದ ಜನರು ನಿತ್ಯವೂ ನಡೆದುಕೊಂಡೇ ಸಾಗಬೇಕು.
ಪ್ರವಾಸಿಗರ ಮೆಚ್ಚಿನ ತಾಣ ಗುಡ್ಡೇಹಳ್ಳಿ
ನಗರಸಭೆ ವ್ಯಾಪ್ತಿಯ ಬಿಣಗಾದ 31 ನೇ ವಾರ್ಡಿಗೆ ಗುಡ್ಡೇಹಳ್ಳಿ ಒಳಪಡುತ್ತದೆ. ಚಿಕ್ಕ ಹಳ್ಳಿಯಾಗಿರುವುದರಿಂದ ಚಾರಣ ಪ್ರಿಯರ ಮೆಚ್ಚಿನ ತಾಣವಾಗಿ ಮಾರ್ಪಟ್ಟಿದೆ. ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಎತ್ತರದ ಬೆಟ್ಟದ ಬಂಡೆಗಲ್ಲಿನ ಮೇಲೆ ನಿಂತು ಅಂಕೋಲಾ, ಗೋಕರ್ಣ ಮುಂತಾದ ಊರುಗಳನ್ನು ಮತ್ತು ಹಸಿರಿನಿಂದ ಕೂಡಿದ ಪ್ರಾಕೃತಿಕ ಸೌಂದರ್ಯ ಹಾಗೂ ಕಡಲಿನ ಸೌಂದರ್ಯ ರಾಶಿಯನ್ನು ಕಣ್ತುಂಬಿಕೊಳ್ಳುತ್ತಾರೆ. ಸಮುದ್ರ ಮಟ್ಟದಿಂದ ಬಹಳ ಎತ್ತರದಲ್ಲಿರುವ ಈ ತಂಪಾದ ಹಳ್ಳಿಯೇ ಬ್ರಿಟೀಷ್ ಅಧಿಕಾರಿಗಳು ಬೇಸಿಗೆ ಕಳೆಯುವ ಇಷ್ಟದ ತಾಣವಾಗಿತ್ತು.
ಇಲ್ಲಿ ಕಾಲ ಕಳೆಯಲು ಬ್ರಿಟೀಷರು ಕಟ್ಟಿದ ಬಂಗಲೆಗಳ ಅಡಿಪಾಯದ ಕುರುಹುಗಳು ಈಗಲೂ ಕಾಣ ಸಿಗುತ್ತವೆ. ಇಲ್ಲಿಗೆ ಬರಲು ಬ್ರಿಟೀಷರು ಇದೇ ಕಾಲು ದಾರಿಯನ್ನು ಅವಲಂಬಿಸಿಕೊಂಡಿದ್ದರು. ಕುದುರೆ ಸವಾರಿ ಮೂಲಕ ಬ್ರಿಟೀಷ್ ಅಧಿಕಾರಿಗಳು ಇಲ್ಲಿಗೆ ಬರುತ್ತಿದ್ದರು ಎಂದು ಹಿರಿಯರು ಹೇಳುತ್ತಾರೆ. ಆದರೆ ನಗರಸಭಾ ವ್ಯಾಪ್ತಿಯಲ್ಲಿರುವ ಈ ಹಳ್ಳಿ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ.