ನವದೆಹಲಿ: ಇಂದು ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿದ ಸಂದರ್ಭದಲ್ಲಿ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಹೊಸ ತಂತ್ರಜ್ಞಾನವನ್ನು ಪರಿಚಯಿಸಿದ್ದು, ಈ ಮೂಲಕ ಡಿಆರ್‌ಡಿಒ ತನ್ನ ಸಂಶೋಧನಾ ಶಕ್ತಿ ಪ್ರದರ್ಶಿಸಿದೆ.
ಇಂದು ಕೆಂಪು ಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಡಿಆರ್‌ಡಿಒ ಇದನ್ನು ಪರಿಚಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಸಮಾರಂಭ ನಡೆದ ಕೆಂಪು ಕೋಟೆಯ ಬಳಿ ಡ್ರೋನ್‍ಗಳ ಮೇಲೆ ಕಣ್ಣಿಡಲು ಹಾಗೂ ಡ್ರೋನ್ ನಿಷ್ಕ್ರಿಯಗೊಳಿಸಲು ಈ ಸಾಧನವನ್ನು ಬಳಸಲಾಗಿತ್ತು.
Advertisement
Advertisement
ಡಿಆರ್‌ಡಿಒ ಈ ಸಾಧನವನ್ನು ಅಭಿವೃದ್ಧಿಪಡಿಸಿದ್ದು, ಇದು 3 ಕಿ.ಮೀ.ಯೊಳಗೆ ಯಾವುದೇ ಮೈಕ್ರೋ ಡ್ರೋನ್ ಇದ್ದರೂ ಪತ್ತೆ ಹಚ್ಚಿ ಅದನ್ನು ನಿಷ್ಕ್ರಿಯಗೊಳಿಸುತ್ತದೆ. ಲೇಸರ್ ತಂತ್ರಜ್ಞಾನದ ಮೂಲಕ ಡ್ರೋನ್‍ಗಳನ್ನು ಹೊಡೆದುರುಳಿಸುತ್ತದೆ. ಸುಮಾರು 1-2.5 ಕಿ.ಮೀ.ಯೊಳಗೆ ಯಾವುದೇ ರೀತಿಯ ಡ್ರೋನ್ ಇದ್ದರೂ ತನ್ನ ಲೇಸರ್ ಸಾಮರ್ಥ್ಯದ ಅನುಗುಣವಾಗಿ ಡ್ರೋನ್‍ಗಳನ್ನು ಹೊಡೆದುರುಳಿಸುವ ಶಕ್ತಿ ಹೊಂದಿದೆ.
Advertisement
ದೇಶದ ಪಶ್ಚಿಮ ಹಾಗೂ ಉತ್ತರ ವಲಯದಲ್ಲಿ ಡ್ರೋನ್‍ಗಳ ಉಪಟಳ ಹೆಚ್ಚುತ್ತಿದ್ದು, ಈ ಸಾಧನದಿಂದ ಅಂತಹ ಡ್ರೋನ್‍ಗಳಿಗೆ ತಕ್ಕ ಉತ್ತರ ನೀಡಬಹುದಾಗಿದೆ, ಅಂತಹ ಡ್ರೋನ್‍ಗಳನ್ನು ಹೊಡೆದುರುಳಿಸಲಿದೆ ಎಂದು ಹೇಳಲಾಗಿದೆ.
Advertisement
74ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ 7ನೇ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಇಂದು ಬೆಳಗ್ಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗಡಿ ತಂಟೆ ಹಾಗೂ ಸೈನಿಕರ ಪರಾಕ್ರಮದ ಕುರಿತು ಮಾತನಾಡಿದ್ದಾರೆ. ಎಲ್‍ಓಸಿ, ಎಲ್‍ಎಸಿ ಬಳಿ ಯಾರು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಾರೋ ಅವರಿಗೆ ನಮ್ಮ ಸೈನಿಕರು ಸರಿಯಾಗಿ ತಿರುಗೇಟು ನೀಡಿದ್ದಾರೆ ಎಂದು ಹೇಳುವ ಮೂಲಕ ಚೀನಾ ಮತ್ತು ಪಾಕಿಸ್ತಾನಕ್ಕೆ ಬಲವಾದ ಸಂದೇಶ ರವಾನಿಸಿದರು.
ಎಲ್‍ಓಸಿ(ಪಾಕಿಸ್ತಾನ ಬಳಿ ಇರುವ ಗಡಿ ನಿಯಂತ್ರಣ ರೇಖೆ)ಯಿಂದ ಎಲ್‍ಎಸಿ(ಚೀನಾ ಜೊತೆ ಹಂಚಿಕೊಂಡಿರುವ ವಾಸ್ತವಿಕ ನಿಯಂತ್ರಣ ರೇಖೆ)ವರೆಗೆ ಯಾರು ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತಾರೋ ಅವರಿಗೆ ನಮ್ಮ ಸೈನಿಕರು ಅರ್ಥವಾಗುವ ಭಾಷೆಯಲ್ಲೇ ಸರಿಯಾದ ತಿರುಗೇಟು ನೀಡಿದ್ದಾರೆ ಎಂದರು.
ಗಲ್ವಾನ್ ಕಣಿವೆಯಲ್ಲಿ ಚೀನಾ ಜೊತೆ ಘರ್ಷಣೆಯಲ್ಲಿ ಹುತಾತ್ಮರಾದ 20 ಸೈನಿಕರ ತ್ಯಾಗವನ್ನು ಸ್ಮರಿಸಿದ ಮೋದಿ, ನಮ್ಮ ಸೈನಿಕರು ಏನು ಮಾಡಬಹುದು, ದೇಶ ಏನು ಮಾಡಬಹುದು ಎಂಬುದನ್ನು ಲಡಾಖ್ ವಿಚಾರದಲ್ಲಿ ವಿಶ್ವಕ್ಕೆ ಗೊತ್ತಾಗಿದೆ. ಆ ಎಲ್ಲ ಧೈರ್ಯಶಾಲಿ ಸೈನಿಕರಿಗೆ ನಾನು ಕೆಂಪುಕೋಟೆಯಲ್ಲಿ ನಿಂತು ನಮಸ್ಕರಿಸುತ್ತೇನೆ ಎಂದು ಹೇಳಿದರು.
ಅದು ಭಯೋತ್ಪಾದನೆಯಾಗಲಿ, ವಿಸ್ತರಣಾವಾದವಾಗಲಿ ಭಾರತ ಎರಡರ ವಿರುದ್ಧವೂ ಹೋರಾಡುತ್ತಿದೆ. ಭಾರತದ ಶಕ್ತಿಯ ಬಗ್ಗೆ ವಿಶ್ವದ ನಂಬಿಕೆ ಬಲಗೊಳ್ಳುತ್ತಿದೆ ಎಂದು ತಿಳಿಸಿದರು.