ಯಾದಗಿರಿ: ಜಿಲ್ಲೆಯಲ್ಲಿ ಇತ್ತೀಚಿಗೆ ಗ್ರಾಮೀಣ ಭಾಗದಲ್ಲಿ ಕೊರೊನ ಸೋಂಕಿನ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಗ್ರಾಮೀಣ ಭಾಗದ ಯುವಕರು ಜಿಲ್ಲಾಡಳಿತ ಮಾಡುವ ಕೆಲಸವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಮಾಡಿ ಮಾದರಿಯಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಮುದೂನುರು ಗ್ರಾಮದ ಯುವಕ ಕೃಷ್ಣಾರೆಡ್ಡಿ ಮತ್ತು ಆತನ ಸ್ನೇಹಿತರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಮುದೂನುರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು 4 ಗ್ರಾಮಗಳು ಬರುತ್ತಿವೆ. ಇತ್ತೀಚಿಗೆ ಈ ಭಾಗದಲ್ಲಿ ಪಾಸಿಟಿವ್ ಸಂಖ್ಯೆ ಜಾಸ್ತಿ ಬರುತ್ತಿವೆ. ಹೀಗಾಗಿ ಈ ಯುವಕರು ತಮ್ಮ ಸ್ವಂತ ಖರ್ಚಿನಲ್ಲಿ ಸಾವಿರಾರು ಮಾಸ್ಕ್ ಮತ್ತು ಸ್ಯಾನಿಟೈಸರ್ ಖರೀದಿ ಮಾಡಿದ್ದಾರೆ. ತಮ್ಮ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮನೆಗಳಿಗೆ ಉಚಿತವಾಗಿ ನೀಡುವ ಮೂಲಕವಾಗಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Advertisement
Advertisement
ಜೊತೆಗೆ ತಾವೇ ಸ್ವತಃ ಮನೆಗೆ ತೆರಳಿ ಕೊರೊನ ಜಾಗೃತಿ ಮೂಡಿಸುತ್ತಿದ್ದಾರೆ. ಯುವಕರೆಲ್ಲರೂ ಕೊರೊನ ಟೆಸ್ಟ್ ಮಾಡಿಸಿಕೊಂಡಿದ್ದು, ನೆಗೆಟಿವ್ ವರದಿ ಬಂದ ಬಳಿಕವೇ ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಗ್ರಾಮದ ಎಲ್ಲಾ ಮನೆಗಳಿಗೆ ತೆರಳುವ ಯುವಕರು ಪ್ರತಿ ಮನೆಯಲ್ಲಿನ ಎಲ್ಲಾ ಸದಸ್ಯರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ನೀಡಿ ಕೊರೊನ ಬಗ್ಗೆ ತಿಳಿ ಹೇಳುತ್ತಿದ್ದಾರೆ.
Advertisement
Advertisement
ಕೃಷಿ ಚಟುವಟಿಕೆಗಳು ನಡೆಯುತ್ತಿರುವ ಹಿನ್ನೆಲೆ, ಜಮೀನಿನಲ್ಲಿ ಕೆಲಸ ಮಾಡುವ ಕೂಲಿಕಾರರಿಗೂ ಕೂಡ ಉಚಿತ ಸ್ಯಾನಿಟೈಸರ್ ನೀಡುತ್ತಿದ್ದಾರೆ. ಒಂದು ಗ್ರಾಮ ಪಂಚಾಯತಿ ಮಾಡಬೇಕಿದ್ದ ಕಾರ್ಯವನ್ನು ಯುವಕರ ತಂಡವೊಂದು ಯಾವುದೇ ಫಲಾಪೇಕ್ಷ ಇಲ್ಲದೆ ಮಾಡುತ್ತಿರುವುದು ಜನರ ಮೆಚ್ಚುಗೆ ಕಾರಣವಾಗಿದೆ.