ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ ಕೇಸ್ ವಿಚಾರವಾಗಿ ಇಂದು ಬಾಲಿವುಡ್ ನಟ ವಿವೇಕ್ ಒಬೆರಾಯ್ ಮನೆ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಡ್ರಗ್ ಮಾಫಿಯಾ ಕೇಸಿನಲ್ಲಿ ಪ್ರಮುಖ ಆರೋಪಿಯಾಗಿರುವ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಆತನನನ್ನು ವಿಚಾರಣೆಗೆ ಒಳಪಡಿಸಲು ಸಿಸಿಬಿ ಪೊಲೀಸರು ಹುಡುಕುತ್ತಿದ್ದಾರೆ. ಆರೋಪಿ ಆದಿತ್ಯ ಆಳ್ವಾ, ನಟ ವಿವೇಕ್ ಒಬೆರಾಯ್ ಅವರ ಸಂಬಂಧಿಯಾಗಿದ್ದು ಅವರ ಮನೆಯಲ್ಲಿ ಇರಬಹುದು ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆ ಇಂದು ಒಬೆರಾಯ್ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದಾರೆ.
Advertisement
Advertisement
ನಾಪತ್ತೆಯಾಗಿರುವ ಆರೋಪಿ ಆದಿತ್ಯ ಆಳ್ವಾನಿಗೆ ವಿವೇಕ್ ಒಬೆರಾಯ್ ತನ್ನ ಮನೆಯಲ್ಲಿ ಆಶ್ರಯ ನೀಡಿರುವ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅವರ ಮನೆಯಲ್ಲಿ ಸರ್ಚ್ ಮಾಡಲು ಬೆಂಗಳೂರು ಸಿಸಿಬಿ ಪೊಲೀಸರು ಕೋರ್ಟಿನಿಂದ ಸರ್ಚ್ ವಾರೆಂಟ್ ಪಡೆದುಕೊಂಡಿದ್ದರು. ಈ ವಿಚಾರವಾಗಿ ನಿನ್ನೆಯೇ ಮುಂಬೈಗೆ ಸಿಸಿಬಿ ಅಧಿಕಾರಿಗಳು ಹೋಗಿದ್ದರು. ಆದರೆ ಮುಂಬೈ ಪೊಲೀಸರು ಸರಿಯಾಗಿ ಸ್ಪಂದಿಸದ ಕಾರಣ ಇಂದು ತಡವಾಗಿ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ಮಾಡಿದ್ದಾರೆ.
Advertisement
Advertisement
ಡ್ರಗ್ಸ್ ಪ್ರಕರಣದಲ್ಲಿ ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದು, ಮುಂಬೈ ಅಥವಾ ದೆಹಲಿಯಲ್ಲಿರೋ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಆದಿತ್ಯ ಆಳ್ವಾ ಮನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೆ ರಾಜಕಾರಣಿ ಮತ್ತು ಉದ್ಯಮಿಗಳ ಮಕ್ಕಳು ಸೇರಿದಂತೆ ಹಲವು ತಾರೆಯರು ಭಾಗಿಯಾಗುತ್ತಿದ್ದಾರೆ. ಪಾರ್ಟಿಗಳಲ್ಲಿ ಡ್ರಗ್ಸ್ ಹೊಳೆ ಹರಿಯುತ್ತಿತ್ತು ಎಂದು ತಿಳಿದು ಬಂದಿತ್ತು.
ಯಾರು ಈ ಆದಿತ್ಯ ಆಳ್ವಾ?
ಆದಿತ್ಯ ಆಳ್ವಾ ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ. ಆದಿತ್ಯ ಆಳ್ವಾನ ಸಹೋದರಿಯನ್ನು ನಟ ವಿವೇಕ್ ಒಬೆರಾಯ್‍ಗೆ ಮದುವೆ ಮಾಡಿಕೊಡಲಾಗಿದೆ. ಹೀಗಾಗಿ ಬಾಮೈದನ ರಕ್ಷಣೆಗಾಗಿ ನಟ ವಿವೇಕ್ ಒಬೆರಾಯ್ ನಿಂತಿರುವ ಶಂಕೆ ವ್ಯಕ್ತವಾಗಿದ್ದು, ಇಂದು ಅವರ ಮನೆಯ ಮೇಲೂ ಸಿಸಿಬಿ ದಾಳಿ ಮಾಡಿದೆ.