ಬೆಂಗಳೂರು: ಹಲವು ವರ್ಷಗಳ ಹಿಂದೆ ಚಂದನವನದಲ್ಲಿ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ನಟ ರಾಮ್ ಕುಮಾರ್ ಇದೀಗ ಕಲರ್ ಫುಲ್ ಸಿನಿ ಜಗತ್ತಿಗೆ ರೀ ಎಂಟ್ರಿ ನೀಡಿದ್ದಾರೆ.
ಇಷ್ಟು ದಿನ ಚಿತ್ರರಂಗದಿಂದ ದೂರ ಸರಿದಿದ್ದ ರಾಮ್ ಕುಮಾರ್, ಹಲವು ವರ್ಷಗಳ ಗ್ಯಾಪ್ ನಂತರ ಇದೀಗ ‘ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಬಣ್ಣ ಹಚ್ಚಿದ್ದಾರೆ. ದಿಯಾ ಸಿನಿಮಾದ ನಟ ದೀಕ್ಷಿತ್ ಹೀರೋ ಆಗಿ ಮಿಂಚುತ್ತಿರುವ ಈ ಸಿನಿಮಾದಲ್ಲಿ ರಾಮ್ ಕುಮಾರ್ ಕೃಷ್ಣಮೂರ್ತಿ ಎನ್ನುವ ಪ್ರಾಧ್ಯಾಪಕರ ಪಾತ್ರದಲ್ಲಿ ಅಭಿನಯಿಸಿದ್ದು, ಸಿನಿಮಾಕ್ಕೆ ನಿರ್ದೇಶಕ ಚೆನ್ನಪ್ಪ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಇತ್ತೀಚೆಗೆ ಶೀರ್ಷಿಕೆ ವಿಚಾರವಾಗಿ ವಿವಾದಲ್ಲಿ ಸಿಲುಕಿದ್ದ ಈ ಸಿನಿಮಾದ ಸಮಸ್ಯೆ ಇದೀಗ ಬಗೆಹರಿದಿದ್ದು, ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಈಗಾಗಲೇ ಚಿತ್ರೀಕರಣದಲ್ಲಿ ರಾಮ್ ಕುಮಾರ್ ಭಾಗಿಯಾಗಿದ್ದು, ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಂಡಿದೆ. ಇದೀಗ ಎರಡನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಲಾಗುತ್ತಿದೆ.
ಅನೇಕ ವರ್ಷಗಳ ಹಿಂದೆ ಬಿಗ್ ಸ್ಕ್ರೀನ್ ಮೇಲೆ ರಾಮ್ ಕುಮಾರ್‍ರನ್ನು ನೋಡಿದ್ದ ಅಭಿಮಾನಿಗಳು ಇದೀಗ ಮತ್ತೆ ಈ ಸಿನಿಮಾದ ಮೂಲಕ ರಾಮ್ ಕುಮಾರನ್ನು ನೋಡಲು ಕಾಯುತ್ತಿದ್ದಾರೆ. ಗೆಜ್ಜೆ ನಾದ, ಸ್ನೇಹ ಲೋಕ, ಹಬ್ಬ, ಕಾವ್ಯ, ಆವೇಶ ಹೀಗೆ ಹಲವು ಹಿಟ್ ಸಿನಿಮಾಗಳಲ್ಲಿ ರಾಮ್ ಕುಮಾರ್ ಅಭಿನಯಿಸಿದ್ದಾರೆ.