ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ದಂಧೆಯ ಒಂದೊಂದೆ ಮುಖಗಳು ಬಯಲಾಗುತ್ತಿವೆ. ಈ ಡ್ರಗ್ಸ್ ದಂಧೆಯನ್ನು ಬಗೆದಷ್ಟೂ ಮತ್ತಷ್ಟು ವಿಷಯಗಳು, ವ್ಯಕ್ತಿಗಳ ನಂಟು ಹೊರ ಬರುತ್ತಿದ್ದು, ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಆದಿತ್ಯ ಆಳ್ವ ಕೂಡ ಮಾಫಿಯಾದ ಸೂತ್ರಧಾರಿ.
ಸಿಸಿಬಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸ್ಯಾಂಡಲ್‌ವುಡ್ ಡ್ರಗ್ ಪ್ರಕರಣದಲ್ಲಿ ರಾಗಿಣಿ ಎರಡನೇ ಆರೋಪಿಯಾಗಿದ್ದರೆ ಆದಿತ್ಯ ಆಳ್ವ ಆರನೇ ಆರೋಪಿಯಾಗಿದ್ದಾನೆ.
ಎಫ್‍ಐಆರ್ ದಾಖಲಾದ ಬೆನ್ನಲ್ಲೇ ಸದಾಶಿವನಗರದ ಆಳ್ವ ನಿವಾಸ ಸಂಪೂರ್ಣ ಖಾಲಿಯಾಗಿದೆ ಆದಿತ್ಯ ಆಳ್ವ ನಾಪತ್ತೆಯಾಗಿದ್ದಾನೆ. ಸಿಸಿಬಿ ತಂಡ ಈಗ ಆದಿತ್ಯ ಆಳ್ವನನ್ನು ಬಂಧಿಸಲು ಶೋಧ ಕಾರ್ಯ ನಡೆಸುತ್ತಿದೆ. ಇದನ್ನೂ ಓದಿ: ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರ ಸೇರಿದಂತೆ 12 ಮಂದಿ ವಿರುದ್ಧ ಕೇಸ್ – ಯಾವೆಲ್ಲ ಸೆಕ್ಷನ್? ಶಿಕ್ಷೆ ಏನು? ಇಲ್ಲಿದೆ ಪೂರ್ಣ ವಿವರ
ಮತ್ತೊಂದು ಕಡೆ, ಜೀವರಾಜ್ ಆಳ್ವ ಅಳಿಯನಾಗಿರುವ ಬಾಲಿವುಡ್ ನಟ ವಿವೇಕ್ ಒಬೇರಾಯ್ ಹೆಸರು ಕೂಡ ಈಗ ಥಳಕು ಹಾಕಿಕೊಂಡಿದೆ. ಶ್ರೀಲಂಕಾದ ಕ್ಯಾಸಿನೋದಲ್ಲಿ ನಡೆದ ಪಾರ್ಟಿಯಲ್ಲಿ ನಟಿ ಸಂಜನಾ ಜೊತೆ ವಿವೇಕ್ ಒಬೇರಾಯ್ ಕಾಣಿಸಿಕೊಂಡಿದ್ದಾರೆ.
ಈ ಎಲ್ಲ ಕಾರಣಕ್ಕೆ ಸ್ಯಾಂಡಲ್‍ವುಡ್‍ನಿಂದ ಬಾಲಿವುಡ್‍ವರೆಗೆ ಡ್ರಗ್ಸ್ ಜಾಲ ಹಬ್ಬಿದ್ಯಾ? ಇನ್ನಷ್ಟು ಸ್ಟಾರ್‌ಗಳ ಮುಖವಾಡ ಬಯಲಾಗುತ್ತಾ ಎನ್ನುವುದು ಕುತೂಹಲ ಕೆರಳಿಸಿದೆ.
ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರ್ಗಿ ಈಗ ಕೇಳಿ ಬರುತ್ತಿರುವ ವ್ಯಕ್ತಿಗಳು ಈ ವ್ಯವಹಾರದಲ್ಲಿ ಬಹಳ ಸಣ್ಣವರು. ಸ್ಯಾಂಡಲ್‌ವುಡ್ ಮಾತ್ರವಲ್ಲ ಬಾಲಿವುಡ್‌ವರೆಗೂ ಈ ಲಿಂಕ್ ಹಬ್ಬಿದೆ. ಸಾಕ್ಷ್ಯಗಳು ಸರಿಯಾಗಿ ಸಿಕ್ಕಿದರೆ ದೊಡ್ಡ ದೊಡ್ಡ ವ್ಯಕ್ತಿಗಳು ಹೊರ ಬರುತ್ತಾರೆ. ಮುಂದಿನ ದಿನಗಳಲ್ಲಿ ಯಾರೆಲ್ಲ ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಎಲ್ಲ ವಿವರಗಳು ಹೊರಬರಲಿದೆ ಎಂದು ತಿಳಿಸಿದ್ದರು.