-ವಿಷ ಕುಡಿದು ತಾನು ಬೆಂಕಿ ಹಚ್ಚಿಕೊಂಡು ಭಗ್ನ ಪ್ರೇಮಿ
-ಬೇರೊಬ್ಬನ ಜೊತೆ ಮದ್ವೆ ಫಿಕ್ಸ್
ಭೋಪಾಲ್: ಸ್ನಾನ ಮಾಡುತ್ತಿದ್ದ ಪ್ರಿಯತಮೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೈದು, ಯುವಕ ಸಹ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಶಾಡೋಲ್ ಜಿಲ್ಲೆಯಲ್ಲಿ ನಡೆದಿದೆ.
ವಿಜಯ್ ಯಾದವ್ ಪ್ರಿಯತಮೆಯನ್ನ ಕೊಂದ ಯುವಕ. ಯುವತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಶಾಡೋಲ್ ಜಿಲ್ಲಾಸ್ಪತ್ರೆಯಲ್ಲಿ ನಿಧನವಾಗಿದ್ದಾಳೆ. ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯ್ ನೆರೆ ಮನೆಯ 20 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದನು. ಯುವತಿಗೆ ಬೇರೊಬ್ಬನ ಜೊತೆ ಮದುವೆ ನಿಶ್ಚಯವಾದ ಕಾರಣ ವಿಜಯ್ ಕೋಪಗೊಂಡಿದ್ದನು.
ಕೋಪಗೊಂಡ ವಿಜಯ್ ಪೆಟ್ರೋಲ್ ಕ್ಯಾನ್ ಹಿಡಿದು ಪ್ರಿಯತಮೆಯ ಮನೆಗೆ ನುಗಿದ್ದಾನೆ. ಸ್ನಾನದ ಕೋಣೆಗೆ ನುಗ್ಗಿ ಯುವತಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಕೊನೆಗೆ ತಾನು ಬೆಂಕಿ ಹಚ್ಚಿಕೊಂಡು ಮನೆಯಿಂದ ಹೊರ ಬಂದು ವಿಷ ಸೇವಿಸಿದ್ದಾನೆ. ಕೂಡಲೇ ಇಬ್ಬರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಯುವತಿಯ ದೇಹದ ಶೇ.60ರಷ್ಟು ಭಾಗ ಬೆಂಕಿಗೆ ಆಹುತಿಯಾಗಿತ್ತು. ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ. ವಿಜಯ್ ಪ್ರಾಣಾಪಾಯದಿಂದ ಪಾರಾಗಿದ್ದು, ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನ ವಿರುದ್ಧ ಕೊಲೆಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಎಸ್ಪಿ ಪ್ರತಿಮಾ ಮೆಥ್ಯೂ ಹೇಳಿದ್ದಾರೆ.