ಹಾಸನ: ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ ನಮ್ಮನ್ನು ಊರಿಗೆ ಕಳುಹಿಸಿ ಎಂದು ಕೇಳಿಕೊಂಡ ಸೋಂಕಿತರ ಬಳಿ ತೆರಳಿದ ಶಾಸಕ ಬಾಲಕೃಷ್ಣ, ನೀವು ಊರಿಗೆ ಹೋದ ತಕ್ಷಣ ಅಕ್ಕಪಕ್ಕದ ಮನೆಯವರು ಬೇರೆ ರೀತಿ ನಿಮ್ಮನ್ನು ನೋಡಬಹುದು, ಹೀಗಾಗಿ ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ ಘಟನೆ ಹಾಸನ ಜಿಲ್ಲೆಯ, ಚನ್ನರಾಯಪಟ್ಟಣದಲ್ಲಿ ನಡೆದಿದೆ.
ಕೊರೊನಾ ರೋಗ ಲಕ್ಷಣಗಳು ಇಲ್ಲದೆ ಪಾಸಿಟಿವ್ ಬಂದಿರುವವರನ್ನು ತಾಲೂಕು ಕೇಂದ್ರದಲ್ಲೇ ಪ್ರತ್ಯೇಕ ವ್ಯವಸ್ಥೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಕ್ವಾರಂಟೈನ್ ಕೇಂದ್ರದಲ್ಲಿ ಬಿಸಿನೀರು, ಮಾಸ್ಕ್ ಸಿಗುತ್ತಿಲ್ಲ. ಕರೆಂಟ್ ಕೂಡ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದ ಸೋಂಕಿತರು, ಕ್ವಾರಂಟೈನ್ ಕೇಂದ್ರದಿಂದ ನಮ್ಮನ್ನು ಊರಿಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ದರು.
Advertisement
Advertisement
ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕ ಬಾಲಕೃಷ್ಣ, ಸರಿಯಾದ ವ್ಯವಸ್ಥೆ ಮಾಡದಿದ್ದರೆ ಅದನ್ನೆಲ್ಲ ವಿಡಿಯೋ ಮಾಡಿ ವಾಟ್ಸಪ್‍ನಲ್ಲಿ ಹಾಕುತ್ತಾರೆ. ಆರೋಗ್ಯ ಇಲಾಖೆಯವರೇ ಉತ್ತಮ ಸೌಲಭ್ಯ ಕೊಡದೆ ಹಿಂದೆ ಸರಿದರೆ ಹೇಗೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ತಿಳಿಹೇಳಿದ್ದಾರೆ. ನಂತರ ಕ್ವಾರಂಟೈನ್‍ನಲ್ಲಿ ಇರುವವರನ್ನು ದಯವಿಟ್ಟು ಅಲ್ಪಸ್ವಲ್ಪ ಲೋಪದೋಷ ಇದ್ದರೆ ಸಹಕರಿಸಿ. ಎಲ್ಲವನ್ನೂ ಸರಿಪಡಿಸಿಕೊಡುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.
Advertisement
Advertisement
ಈಗಾಗಲೇ 6 ಎಲೆಕ್ಟ್ರಿಕಲ್ ಗ್ಯಾಸ್ ಗೀಸರ್ ಗಳು ಮತ್ತು ಬಟ್ಟೆ ತೊಳೆಯುವ ವಾಷಿಂಗ್ ಯಂತ್ರವನ್ನು ತರಿಸಿಕೊಡಲು ವ್ಯವಸ್ಥೆ ಮಾಡಿದ್ದೇನೆ. ಬಲ್ಬ್‌ಗಳಿಗೂ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆಯೇ ಎಲ್ಲ ವ್ಯವಸ್ಥೆ ಸರಿಯಾಗಲಿದೆ. ಆಸ್ಪತ್ರೆಯಿಂದ ನೀವು ಗುಣಮುಖರಾದ ರಿಪೋರ್ಟ್ ಕೊಟ್ಟು ಸಹಿ ಮಾಡಿಸಿ ಕಳುಹಿಸಿ ಕೊಡುವವರೆಗೂ ಸಹಕರಿಸಿ ಎಂದಿದ್ದಾರೆ. ಜೊತೆಗೆ ಡ್ರೈ ಪ್ರೂಟ್ಸ್ ಹಾಗೂ ಬೇಕರಿ ಪದಾರ್ಥಗಳನ್ನು ತರಿಸಿಕೊಟ್ಟು ಧೈರ್ಯ ತುಂಬಿದ್ದಾರೆ.