ಶಿವಮೊಗ್ಗ: ಕೊರೊನಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದ ವ್ಯಕ್ತಿಯೇ ಕೊರೊನಾಗೆ ಬಲಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೊಪ್ಪ ನಿವಾಸಿಯಾದ ಶರಣ್ (36) ಮೃತ ದುರ್ದೈವಿ. ಶಿವಮೊಗ್ಗದಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಶರಣ್ ಕೊರೊನಾ ಬಂದ ದಿನದಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಪೊಲೀಸರು, ಪತ್ರಕರ್ತರು ಹಾಗೂ ಸಾರ್ವಜನಿಕರಿಗೆ ಉಚಿತವಾಗಿ ಎನ್ 95 ಮಾಸ್ಕ್, ಸ್ಯಾನಿಟೈಸರ್ ಉಚಿತವಾಗಿ ಹಂಚುವ ಮೂಲಕ ತನ್ನ ಕೈಲಾದ ಸಹಾಯ ಮಾಡುತ್ತಿದ್ದರು.
ಕೊರೊನಾದಿಂದ ಪ್ರತಿಯೊಬ್ಬರು ದೂರ ಇರಿ. ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಎಂದು ಮನವಿ ಮಾಡುತ್ತಿದ್ದರು. ಆದರೆ ಕಳೆದ 4 ದಿನದ ಹಿಂದೆ ಮೃತ ಶರಣ್‍ಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸೋಂಕು ಕಾಣಿಸಿಕೊಂಡ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಶರಣ್ ಸೋಂಕಿಗೆ ಬಲಿಯಾಗಿದ್ದಾರೆ. ಇದನ್ನು ಓದಿ: ಕೋವಿಡ್ ಬಂದ್ರೂ ಜಯಿಸುತ್ತೇನೆಂದು, ವ್ಯಾಕ್ಸಿನ್ ತೆಗೆದುಕೊಳ್ಳಲು ಅಸಡ್ಡೆ- ಸರ್ಕಾರಿ ವೈದ್ಯ ಕೊರೊನಾಗೆ ಬಲಿ
ಶರಣ್ ಪತ್ನಿ ಸಹ ಕಳೆದ ಎರಡು ವರ್ಷದ ಹಿಂದೆ ಮೃತಪಟ್ಟಿದ್ದರು. ಪತ್ನಿ ಮೃತಪಟ್ಟ ಬಳಿಕ ತನ್ನ ಪುಟ್ಟ ಮಗಳೊಂದಿಗೆ ನೋವನ್ನು ಮರೆತು ಜೀವನ ಸಾಗಿಸುತ್ತಿದ್ದರು. ಆದರೆ ಇದೀಗ ಕೊರೊನಾ ಶರಣ್‍ನನ್ನು ಬಲಿ ತೆಗೆದುಕೊಂಡಿದೆ. ಇದೀಗ ಅಪ್ಪ ಅಮ್ಮ ಇಬ್ಬರನ್ನು ಕಳೆದುಕೊಂಡು ಮೂರು ವರ್ಷದ ಹೆಣ್ಣು ಮಗು ಅನಾಥವಾಗಿದೆ.