– ಮಾಂಗಲ್ಯ ಸರ, ಉಂಗುರು ಸಿಕ್ಕರೂ ಕಳ್ಳ ಸಿಗಲಿಲ್ಲ
– 13 ದಿನದ ಬಳಿಕ ಪೇಪರ್ ನಲ್ಲಿ ಸುತ್ತಿ ಕಳ್ಳನೇ ಇಟ್ಟೋದ್ನಂತೆ
– ನಾವು ಕದ್ದಿಲ್ಲವೆಂದ ಆಸ್ಪತ್ರೆ ಸಿಬ್ಬಂದಿ
ಚಿಕ್ಕಮಗಳೂರು: ಕೊರೊನಾ ಸೋಂಕಿತೆ ಆಸ್ಪತ್ರೆಗೆ ದಾಖಲಾಗುವಾಗ ಕೊರಳಲ್ಲಿ ಮಾಂಗಲ್ಯ ಸರವಿತ್ತು. ಆದರೆ ಮೃತರಾದ ಬಳಿಕ ಮೃತದೇಹ ಹೊರ ತಂದಾಗ ಮಾಂಗಲ್ಯ ಸರ ಹಾಗೂ ಕೈಯಲ್ಲಿದ್ದ ಉಂಗುರ ಇಲ್ಲದಂತಾಗಿತ್ತು. ಈ ಕುರಿತು ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದಾಗ ಗೊತ್ತಿಲ್ಲ ಎಂದಿದ್ದರು. ಆದರೆ 13 ದಿನದ ಬಳಿಕ ಕಳ್ಳನೇ ಮಾಂಗಲ್ಯ ಸರ ಇಟ್ಟು ಹೋದನಂತೆ.
Advertisement
ಈ ಘಟನೆ ಜಿಲ್ಲೆಯಲ್ಲಿ ಆಗಸ್ಟ್ 10ರಂದು ನಡೆದಿತ್ತು. ನಾಲ್ಕೈದು ತಿಂಗಳಿಂದ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರೋ ವೈದ್ಯರು, ನರ್ಸ್‍ಗಳ ಮೇಲೆ ಅನುಮಾನ ಮೂಡುವಂತ ಘಟನೆ ಇದಾಗಿತ್ತು. ತಾಲೂಕಿನ ತೇಗೂರಿನ ಪ್ರೇಮಕುಮಾರಿಯವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಆಗಸ್ಟ್ 8ರಂದು ಜಿಲ್ಲೆಯ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರೇಮಕುಮಾರಿ ಆಗಸ್ಟ್ 10ರಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಆಗಸ್ಟ್ 11ರಂದು ಅವರ ಅಂತ್ಯಸಂಸ್ಕಾರವೂ ನಡೆಯಿತು. ಆದರೆ ಅದೇ ದಿನ ಮಧ್ಯಾಹ್ನ ಅವರ ಸಂಬಂಧಿಕರಿಗೆ ಮಹಿಳೆ ಮೈಮೇಲಿದ್ದ ವಡವೆಗಳನ್ನ ಕೊಡುವಾಗ ಆಸ್ಪತ್ರೆ ಸಿಬ್ಬಂದಿ ಕೈಬಳೆ, ಕಾಲುಂಗುರ ಹಾಗೂ ಕಿವಿ ಓಲೆಯನ್ನು ಮಾತ್ರ ನೀಡಿದ್ದಾರೆ.
Advertisement
Advertisement
ಈ ವೇಳೆ ಕುಟುಂಬಸ್ಥರು ಉಂಗುರ ಹಾಗೂ ಮಾಂಗಲ್ಯ ಸರ ಎಲ್ಲಿ ಎಂದು ಕೇಳಿದಾಗ ನಮಗೆ ಗೊತ್ತಿಲ್ಲ, ರಾತ್ರಿ ಪಾಳಿಯಲ್ಲಿದ್ದವರನ್ನು ಕೇಳಿ ಎಂದಿದ್ದರಂತೆ. ಬಳಿಕ ಕುಟುಂಬಸ್ಥರು ಜಿಲ್ಲಾ ಸರ್ಜನ್ ಅವರಿಗೆ ಲಿಖಿತ ದೂರು ನೀಡಿದ್ದರು. ಜಿಲ್ಲಾ ಸರ್ಜನ್ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆಸಿ ವಿಚಾರಿಸಿದಾಗಲೂ ಸಿಬ್ಬಂದಿ ನಮಗೆ ಗೊತ್ತಿಲ್ಲ ಎಂದಿದ್ದರು. ಮೃತ ಪ್ರೇಮಕುಮಾರಿ ಕುಟುಂಬಸ್ಥರು ಪೊಲೀಸ್ ಠಾಣೆಗೂ ದೂರು ನೀಡಿದ್ದರು. ಪ್ರೇಮಕುಮಾರಿ ಜೀವಂತವಾಗಿದ್ದಾಗ ಇದ್ದ ಫೋಟೋಗಳನ್ನ ಜಿಲ್ಲಾ ಸರ್ಜನ್ ಹಾಗೂ ಪೊಲೀಸರಿಗೆ ನೀಡಿದ್ದರು. ಎಫ್‍ಐಆರ್ ದಾಖಲಿಸದ ಪೊಲೀಸರು ಕೆಲವರ ಮೇಲೆ ಅನುಮಾನವಿದೆ, ವಿಚಾರಿಸುತ್ತೇವೆ ಎಂದಿದ್ದರಂತೆ. ಆದರೆ, ತಾಳಿ ಮಾತ್ರ ಸಿಗಲಿಲ್ಲ.
Advertisement
ಆಸ್ಪತ್ರೆಯ ಸಿಸಿಟಿವಿಯಲ್ಲಿ ಸಹ ಯಾರು ಕದ್ದಿದ್ದಾರೆಂಬ ಸ್ಪಷ್ಟ ಮಾಹಿತಿ ಇರಲಿಲ್ಲ. ಆಗಸ್ಟ್ 10 ಹಾಗೂ 11 ರಂದು ರಾತ್ರಿ ಕೆಲಸ ಮಾಡಿದ್ದ ಓರ್ವ ವೈದ್ಯ, ಓರ್ವ ಸ್ಟಾಪ್ ನರ್ಸ್, ಹೌಸ್ ಕೀಪಿಂಗ್ ಮತ್ತು ಬಾಡಿ ಶೀಫ್ಟ್ ಮಾಡಿದ ನಾಲ್ವರ ಮೇಲೆ ಅನುಮಾನವಿದೆ ಎಂದು ಅವರನ್ನೂ ವಿಚಾರಣೆಗೊಳಪಡಿಸಿದರು. ಆದರೂ ಎಲ್ಲರದ್ದೂ ಒಂದೇ ಉತ್ತರ ನಮಗೆ ಗೊತ್ತಿಲ್ಲ ಎಂಬುದು.
ಈ ಬಗ್ಗೆ ಪೊಲೀಸರು ಹಲವರನ್ನ ವಿಚಾರಣೆಗೊಳಪಡಿಸಿದ್ದರು. ಮೃತ ಪ್ರೇಮಕುಮಾರಿ ಕುಟುಂಬಸ್ಥರು ಆಸ್ಪತ್ರೆಯೊಳಗಿನ ಕಳ್ಳರದ್ದೇ ಈ ಕೆಲಸ, ಹೊರಗಿನ ಕಳ್ಳರು ಬರಲು ಹೇಗೆ ಸಾಧ್ಯ ಎಂದು ಆಸ್ಪತ್ರೆಯ ಸಿಬ್ಬಂದಿ ಮೇಲೆ ಅನುಮಾನಗೊಂಡು ಅವರೇ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಇತ್ತ ಪೊಲೀಸರು ತನಿಖೆ ಮುಂದುವರೆಸಿದ್ದರು. ಆದರೂ ಕಳ್ಳರು ಪತ್ತೆಯಾಗಿರಲಿಲ್ಲ. ಆದರೆ ಕೋವಿಡ್ ಆಸ್ಪತ್ರೆಯೊಳಗೆ ಸರ ಹಾಗೂ ಉಂಗುರವನ್ನು ಕವರ್‍ನಲ್ಲಿ ಹಾಕಿ, ಪೇಪರ್‍ನಲ್ಲಿ ಸುತ್ತಿ ಟೇಬಲ್ ಮೇಲೆ ಇಟ್ಟಿದ್ದಾರೆ. ಸರ ಹಾಗೂ ಉಂಗುರ ಕದ್ದ ಕಳ್ಳ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಯೋ ಅಥವಾ ಹೊರಗಿನ ಕಳ್ಳನೋ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ. ಯಾರಾದರೂ ಕದ್ದಿರಲಿ ವಡವೆ ಸಿಕ್ಕಿತಲ್ಲ ಎಂದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಕಳ್ಳ ಇನ್ನೂ ನಿಗೂಢವಾಗಿಯೇ ಉಳದಿದ್ದಾನೆ.