ಸೋಂಕಿತರ ಸಹಾಯಕ್ಕೆ ಬಂದ ದರ್ಶನ್- ಉಸಿರು ತಂಡದ ಕಾರ್ಯಕ್ಕೆ ಸಾಥ್

Public TV
2 Min Read
darshan

ಬೆಂಗಳೂರು: ಕೊರೊನಾ ಸಮಯದಲ್ಲಿ ಆಮ್ಲಜನಕದ ಕೊರತೆ ತೀವ್ರವಾಗಿ ಕಾಡುತ್ತಿದೆ. ಸಾಕಷ್ಟು ಸೆಲೆಬ್ರಿಟಿಗಳು ಈ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಈಗ ಬಾಕ್ಸ್ ಆಫೀಸ್ ಸುಲ್ತಾನ ದರ್ಶನ್ ಕೂಡ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡಲು ಕೈ ಜೋಡಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿತರಿಗೆ ಆಮ್ಲಜನಕದ ಸಪೋರ್ಟ್ ನೀಡಿ ಸಾಮಾಜಿಕ ಕಳಕಳಿ ಮೆರೆಯುತ್ತಿರುವ ಉಸಿರು ತಂಡದ ಕಾರ್ಯ ಚಾಲೆಂಜಿಂಗ್ ಸ್ಟಾರ್ ದರ್ಶನ್‍ಗೆ ಮೆಚ್ಚುಗೆಯಾಗಿದೆ. ಉಸಿರು ತಂಡಕ್ಕೆ ನಟ ದರ್ಶನ್ ಬೆಂಬಲ ನೀಡಿದ್ದಾರೆ.

ಉಸಿರು ಹೆಸರಿನ ಕೊವಿಡ್ ಆಕ್ಸಿಜನ್ ಕೇರ್‍ಗೆ ದರ್ಶನ್ ಬೆಂಬಲವಾಗಿ ನಿಂತಿದ್ದಾರೆ. ಈ ಬಗ್ಗೆ ಪೋಸ್ಟ್ ಹಾಕಿರುವ ಉಸಿರು ತಂಡ, ಉಸಿರು ತಂಡಕ್ಕೆ ಗಜ ಬಲ ಸಿಕ್ಕಂತಾಗಿದೆ. ಉಸಿರು ತಂಡಕ್ಕೆ ಬೆಂಬಲ ನೀಡಿರುವ ನಟ ದರ್ಶನ್‍ಗೆ ಕವಿರಾಜ್ ಹಾಗೂ ಸಂಚಾರಿ ವಿಜಯ್ ಧನ್ಯವಾದಗಳನ್ನು ತಿಳಿಸಿದ್ದಾರೆ. ನಮ್ಮ ಉಸಿರು ತಂಡಕ್ಕೀಗ ಗಜಬಲ. ಎಲ್ಲಾ ಜಿಲ್ಲೆಗಳಿಗೂ ಸೇವೆ ಒದಗಿಸುವ ಸಲುವಾಗಿ ನಿಮ್ಮ ಸಹಕಾರ ತಂಡಕ್ಕೆ ಮತ್ತಷ್ಟು ಸಮಾಜಮುಖಿ ಕೆಲಸ ಮಾಡಲು ಪ್ರೇರೇಪಿಸಿದೆ. ಧನ್ಯವಾದಗಳು ಸರ್ ಎಂದು ಫೇಸ್‍ಬುಕ್‍ನಲ್ಲಿ ಸಂಚಾರಿ ವಿಜಯ್ ಬರೆದುಕೊಂಡಿದ್ದಾರೆ.

ಉಸಿರು ತಂಡದಲ್ಲಿ ನಿರ್ದೇಶಕ-ಸಂಗೀತ ನಿರ್ದೇಶಕ ಸಾಧು ಕೋಕಿಲ, ನಟಿ ನೀತೂ ಶೆಟ್ಟಿ, ನಿರ್ದೇಶಕಿ ಕವಿತಾ ಲಂಕೇಶ್, ನಿರ್ದೇಶಕ ದಿನಕರ್ ತೂಗುದೀಪ, ನಟ ಸಂಚಾರಿ ವಿಜಯ್, ಗೀತ ಸಾಹಿತಿ-ನಿರ್ದೇಶಕ ಕವಿರಾಜ್, ನಿರ್ದೇಶಕ ಚೈತನ್ಯ, ನಟಿ ಅಕ್ಷತಾ ಪಾಂಡವಪುರ, ಡಾ.ಕಿರಣ್, ಸುಂದರ್, ವಿನಯ್ ಪಾಂಡವಪುರ, ಮಾದೇಶ್ ಗೌಡ ಮುಂತಾದವರಿದ್ದಾರೆ. ಇದೀಗ ಇದೇ ತಂಡದ ಜೊತೆ ನಟ ದರ್ಶನ್ ಕೈ ಜೋಡಿಸಿದ್ದಾರೆ.

ಕೋವಿಡ್-19 ಪಾಸಿಟಿವ್ ಕಂಡುಬಂದವರಲ್ಲಿ ಕೆಲವರಲ್ಲಿ ಉಸಿರಾಟದ ಸಮಸ್ಯೆ ಉಂಟಾಗುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಇರುವುದರಿಂದ, ಆಮ್ಲಜನಕದ ಅವಶ್ಯಕತೆ ಇರುವ ಸೋಂಕಿತರಿಗೆ ಉಚಿತವಾಗಿ ಪ್ರಾಣವಾಯು ಪೂರೈಸಲಾಗುತ್ತದೆ. ಆಸ್ಪತ್ರೆಗಳಲ್ಲಿ ಬೆಡ್ ಸಿಗುವವರೆಗೂ, ಉಸಿರಾಟದ ತೊಂದರೆ ಅನುಭವಿಸುತ್ತಿರುವ ಸೋಂಕಿತರ ಮನೆಗೆ ತೆರಳಿ ಉಸಿರು ತಂಡ ಆಕ್ಸಿಜನ್ ಕಾನ್ಸನ್‌ಟ್ರೇಟರ್‌ಗಳ ಮುಖಾಂತರ ಉಚಿತವಾಗಿ ಆಮ್ಲಜನಕದ ಸಪೋರ್ಟ್ ಮನೆಯಲ್ಲೇ ನೀಡುವ ಕೆಲಸವನ್ನು ಉಸಿರು ತಂಡ ಮಾಡುತ್ತಿದೆ.

ಕೊರೊನಾ ರೋಗಿಗಳಿಗೆ ಉಸಿರಾಟದ ಸಮಸ್ಯೆ ಇದ್ದರೆ ಅಂಥವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಬಳಗದ ಸಹಯೋಗದೊಂದಿಗೆ ಮೈಸೂರಿನಲ್ಲಿ ಉಸಿರು ತಂಡದ ಮೊದಲ ಸೇವೆ ಒದಗಿಸಿದೆ. ಈ ಬಗ್ಗೆ ಉಸಿರು ತಂಡ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *