– ಅರುಣಾ ಆತ್ಮಹತ್ಯೆಗೆ ಕಾರಣವೇನು..?
ಹೈದರಾಬಾದ್: ಮಹಿಳಾ ಕೃಷಿ ಅಧಿಕಾರಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅಂಧ್ರಪ್ರದೇಶದ ಸಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿಯನ್ನು ಅರುಣಾ(23) ಎಂದು ಗುರುತಿಸಲಾಗಿದೆ. ಅರುಣಾ ಮನೋರ್ ಮಂಡಲದಲ್ಲಿರುವ ಮಂಜೀರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ಸಂಗರೆಡ್ಡಿಯಲ್ಲಿರುವ ರೈತ ತರಬೇತಿ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಘಟನೆ ಕಳೆದ ಶನಿವಾರವೇ ನಡೆದಿದೆ ಎನ್ನಲಾಗಿದ್ದು, ಸೇತುವೆಯ ಮೇಲೆ ಬಹಳ ದಿನಗಳಿಂದ ಕಾರು ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಕಾರನ್ನು ತಪಾಸಣೆ ಮಾಡಿದಾಗ ಅದರಲ್ಲಿ ಅರುಣಾ ಅವರ ಫೋನ್ ಮತ್ತು ಅವರು ವಾಲೆಟ್ ಸಿಕ್ಕಿದೆ. ನಂತರ ಅರುಣಾ ಮನೆಯವರನ್ನು ಸಂಪರ್ಕ ಮಾಡಿದ್ದು, ಅವರು ಕೂಡ ಅರುಣಾ ಅವರು ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಈ ವಿಷಯ ತಿಳಿದ ಪೊಲೀಸರು ಅಗ್ನಿಶಾಮಕ ದಳವರ ಜೊತೆ ಬಂದು ಅರುಣಾ ಅವರ ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಅರುಣಾ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ತಿಳಿದು ಬಾರದ ಕಾರಣ ಪೊಲೀಸರು ತನಿಖೆಯನ್ನು ಆರಂಭ ಮಾಡಿದ್ದಾರೆ. ಈ ಸಂಬಂಧ ಸಂಗರೆಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.