– ವಿಧಾನಸೌಧ ಮುತ್ತಿಗೆ ಹಾಕೋ ಎಚ್ಚರಿಕೆ
ಶಿವಮೊಗ್ಗ: ರೈತರಿಗೆ ಮರಣ ಶಾಸನವಾಗಿರುವ ಭೂಸುಧಾರಣೆ ಕಾಯ್ದೆ ತಿದ್ದುಪಡಿ ಸೇರಿದಂತೆ, ಜನವಿರೋಧಿ ಕಾಯ್ದೆಗಳ ವಿರೋಧಿಸಿ ಸೆ. 21 ರಿಂದ ಬೆಂಗಳೂರಿನ ಮೌರ್ಯ ಸರ್ಕಲ್ ಬಳಿಯ ಮಹಾತ್ಮಗಾಂಧಿ ಪ್ರತಿಮೆ ಎದುರು ಆಹೋರಾತ್ರಿ ಧರಣಿ ಮತ್ತು ವಿಧಾನಸೌಧ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ರೈತ ಸಂಘ ಎಚ್ಚರಿಸಿದೆ.
Advertisement
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಮಾಹಿತಿ ನೀಡಿದ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ, ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಕೃಷಿಯನ್ನೇ ಕಸಿದುಕೊಂಡಿದೆ. ಬಹುರಾಷ್ಟ್ರೀಯ ಕಂಪೆನಿಗಳಿಗೆ, ಕಾರ್ಪೋರೇಟ್ ಕಂಪೆನಿಗಳಿಗೆ ರತ್ನಗಂಬಳಿ ಹಾಕುವ ದೃಷ್ಟಿಯಿಂದ ಈ ಕಾಯ್ದೆ ಜಾರಿಗೆ ತರಲು ಹೊರಟಿದೆ. ಬಿಜೆಪಿ ಸರ್ಕಾರದ ಅನಾಚಾರವಿದು. ಯಾವುದೇ ಕಾರಣಕ್ಕೂ ಈ ಕಾಯ್ದೆ ಜಾರಿಯಾಗಬಾರದು. ಮುಂಬರುವ ಅಧಿವೇಶನದಲ್ಲಿ ಭೂಸುಧಾರಣೆ ಕಾಯ್ದೆಯನ್ನು ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.
Advertisement
ಸೆ.21 ರಿಂದ ಅಧಿವೇಶನ ಆರಂಭವಾಗಲಿದ್ದು, ಪ್ರಾರಂಭದ ದಿನದಿಂದಲೇ ಅಧಿವೇಶನ ಮುಗಿಯುವವರೆಗೂ ಧರಣಿ ನಡೆಸುತ್ತೇವೆ. ಭೂಸುಧಾರಣಾ ಕಾಯ್ದೆಯ ಜೊತೆಗೆ ಕಾರ್ಮಿಕ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಕೂಡ ಹಿಂಪಡೆಯಬೇಕು. ಈ ಧರಣಿಯಲ್ಲಿ ರಾಜ್ಯದ ಲಕ್ಷಾಂತರ ರೈತರು ಭಾಗವಹಿಸಲಿದ್ದು, ಶಿವಮೊಗ್ಗ ಜಿಲ್ಲೆಯಿಂದಲೂ ಕೂಡ ಸಾವಿರಕ್ಕೂ ಹೆಚ್ಚು ರೈತರು ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.
Advertisement
Advertisement
ಬಿಎಸ್‍ವೈ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸುವಾಗ ನನ್ನದು ರೈತ ಪರ ಸರ್ಕಾರ, ನಾನು ರೈತರ ಕಷ್ಟಗಳನ್ನು ದೂರ ಮಾಡುತ್ತೇನೆ ಎಂದು ಪ್ರಮಾಣ ಮಾಡಿದ್ದರು. ಆದರೆ ಈಗ ಮಾಡುತ್ತಿರುವುದಾದರೂ ಏನು, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಖಾಸಗಿ ಮಾರುಕಟ್ಟೆಗೆ ಅವಕಾಶ ನೀಡಿದೆ. ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಶ್ರೀಮಂತರು ಭೂಮಿ ಖರೀದಿಸಿ ಖಾಸಗಿ ಬಡಾವಣೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜನವಿರೋಧಿ ಕಾಯ್ದೆಗಳನ್ನು ರೂಪಿಸುತ್ತಾ ಬಂದಿವೆ ಎಂದು ಆಪಾದಿಸಿದ್ದಾರೆ.