– ವಿಜಯಪುರ ಗ್ರಾಮೀಣ ಪೊಲೀಸರ ಭರ್ಜರಿ ಕಾರ್ಯಾಚರಣೆ
ವಿಜಯಪುರ: ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತನ್ನ ಸ್ವಂತ ಊರಿನಲ್ಲಿಯೇ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಸೆರೆ ಹಿಡಿದು ಹೆಡೆಮುರಿ ಕಟ್ಟುವಲ್ಲಿ ವಿಜಯಪುರ ಗ್ರಾಮೀಣ ಪೊಲೀಸರು ಯಶಸ್ವಿ ಆಗಿದ್ದಾರೆ.
ವಿಜಯಪುರ ಜಿಲ್ಲೆಯ ಡೋಮನಾಳ ಗ್ರಾಮದ ಕಿರಣ್ ರಾಠೋಡ(26) ಎಂಬಾತ ನವೆಂಬರ್ 23, 2020ರಂದು ತಾನು ವಾಸಿಸುವ ಡೋಮನಾಳ ಲಂಬಾಣಿ ತಾಂಡಾ ಸಂಖ್ಯೆ 2 ರಲ್ಲಿ ಕಳ್ಳತನ ಮಾಡಿ ಪರಾರಿಯಾಗಿದ್ದ. ಅನಿಲ್ ಶಂಕರ್ ರಾಠೋಡ ಎಂಬವರ ಮನೆಗೆ ಕನ್ನ ಹಾಕಿದ್ದ ಆರೋಪಿ ಸುಮಾರು ರೂ 6 ಲಕ್ಷ ಮೌಲ್ಯದ 53 ಗ್ರಾಂ ಬಂಗಾರದ ತಾಳಿ, 30 ಗ್ರಾಂ ಚಿನ್ನದ ಸರ, 9 ಗ್ರಾಂ ಚಿನ್ನದ ಕಿವಿಯೋಲೆ ಸೇರಿದಂತೆ ಒಟ್ಟು 116 ಗ್ರಾಂ ಚಿನ್ನಾಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದನು.
ಇದೀಗ ವಿಜಯಪುರ ನಗರದ ಹೊರವಲಯದ ಭೂತನಾಳ ಬಳಿ ಆರೋಪಿಯನ್ನು ವಿಜಯಪುರ ಎಸ್ಪಿ ಅನುಪಮ ಅಗ್ರವಾಲ, ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣ ಅರಸಿದ್ಧಿ ನೇತೃತ್ವದ ತಂಡ ಬಂಧಿಸಿದೆ. ಕದ್ದಿದ್ದ ಎಲ್ಲ ಚಿನ್ನಾಭರಣಗಳನ್ನು ಕಿರಣ್ ಮನೆಯಲ್ಲಿಯೇ ಇಟ್ಟುಕೊಂಡಿದ್ದ. ಪೊಲೀಸರು ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.