ಬೆಳಗಾವಿ: ಗೀತ ರಚನೆಕಾರ ಕೆ.ಕಲ್ಯಾಣ್ ಅವರ ದಾಂಪತ್ಯ ಕಲಹ ಸುಖಾಂತ್ಯ ಕಾಣುವ ಸಾಧ್ಯತೆ ಇದ್ದು, ವಿಚ್ಛೇದನ ಅರ್ಜಿ ವಾಪಸ್ ಪಡೆಯಲು ಕೆ.ಕಲ್ಯಾಣ್ ಪತ್ನಿ ಅಶ್ವಿನಿ ನಿರ್ಧಾರ ಮಾಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯಾ ಅವರು ವಿಚ್ಛೇದನ ಅರ್ಜಿ ವಾಪಸ್ ಪಡೆಯಲು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದ್ದು, ಇಂದು ಬೆಳಗಾವಿ ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿ ಅರ್ಜಿ ವಾಪಸ್ ಪಡೆಯುವ ಸಾಧ್ಯತೆ ಇದೆ.
ಜೂನ್ 16ರಂದು ಬೆಳಗಾವಿಯ ಕೌಟುಂಬಿಕ ನ್ಯಾಯಾಲಯಕ್ಕೆ ವಿಚ್ಛೇದನ ಅರ್ಜಿ ಸಲ್ಲಿಸಿದ್ದ ಅಶ್ವಿನಿ ಅವರು, ಪತಿಯಿಂದ ವಿಚ್ಛೇದನ ಕೋರಿದ್ದರು. ಆದರೆ ಪ್ರಕರಣದಲ್ಲಿ ಆರೋಪಿ ಶಿವಾನಂದ ವಾಲಿ ಕರಾಳ ಮುಖ ಬಯಲಾಗುತ್ತಿದ್ದಂತೆ ಅಶ್ವಿನಿ ಅವರು ತಮ್ಮವನ್ನು ನಿರ್ಧಾರ ಬದಲಿಸಿಕೊಂಡಿದ್ದಾರೆ.
ಕೆ.ಕಲ್ಯಾಣ್ ದೂರಿನ ಮೇರೆಗೆ ಶಿವಾನಂದ ವಾಲಿ ಬಂಧಿಸಿದ್ದ ಪೊಲೀಸರು ಆರೋಪಿಯ ಕರಾಳ ಮುಖವನ್ನು ಬಯಲು ಮಾಡಿದ್ದಾರೆ. ಅಲ್ಲದೇ ಅಶ್ವಿನಿ ಅವರಿಗೆ ಕೌನ್ಸಲಿಂಗ್ ಸಹ ಮಾಡಿ ತಪ್ಪಿನ ಅರಿವು ಮಾಡಿಸಿದ್ದಾರೆ. ಉಳಿದಂತೆ ಸೆ.30ರಂದು ಬೆಳಗಾವಿಯ ಮಾಳಮಾರುತಿ ಠಾಣೆಗೆ ಕೆ.ಕಲ್ಯಾಣ್ ಅವರು ದೂರು ನೀಡಿದ್ದರು. ದೂರಿನಲ್ಲಿ ತನ್ನ ಪತ್ನಿ ಅಶ್ವಿನಿ, ಅತ್ತೆ, ಮಾವ ಅಪಹರಣವಾಗಿದೆ ಎಂದು ತಿಳಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ಪೊಲೀಸರು ಆರೋಪಿ ಶಿವಾನಂದ ವಾಲಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಈ ವೇಳೆ ಶಿವಾನಂದ ವಾಲಿ ಬೆಳಗಾವಿಯ ಅನಂತಶಯನ ಗಲ್ಲಿಯಲ್ಲಿರುವ ಅಶ್ವಿನಿ ಅವರ ಕುಟುಂಬದವರ ಆಸ್ತಿ ತನ್ನ ಹೆಸರಿಗೆ ಮಾಡಿಕೊಂಡಿದ್ದ. ಅಲ್ಲದೇ ಕುಟುಂಬದವರಿಂದ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದ.
ಪ್ರಕರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಶ್ವಿನಿ ಅವರು, ಪ್ರಕರಣದ ಸಂಬಂಧ ನನಗೆ ಕೌನ್ಸಲಿಂಗ್ ನಡೆಯುತ್ತಿದೆ. ಇದಾದ ಬಳಿಕ ಪ್ರಕರಣ ಕುರಿತು ಎಲ್ಲಾ ಮಾಹಿತಿಯನ್ನು ನೀಡುತ್ತೇನೆ ಎಂದಿದ್ದರು. ಇತ್ತ ಇದೇ ವೇಳೆ ಪ್ರತಿಕ್ರಿಯೆ ನೀಡಿದ್ದ ಕೆ.ಕಲ್ಯಾಣ್ ಅವರು, ನನ್ನ ಪತ್ನಿ ನಡುವೆ ಕಮ್ಯುನಿಕೇಷನ್ ಗ್ಯಾಪ್ ಆಗಿದೆ ಅಷ್ಟೇ. ನಮ್ಮ ಖಾಸಗಿ ಜೀವನ ಈಗ ಸಾರ್ವಜನಿಕವಾಗಿರುವ ಕಾರಣ ಎಲ್ಲಾ ಮಾಹಿತಿಯನ್ನು ನೀಡುತ್ತಿದ್ದೇನೆ. ನಾನು ನನ್ನ ಪತ್ನಿಯನ್ನು ತುಂಬಾ ಪ್ರೀತಿಸುತ್ತೇನೆ. ಮುಂದೇ ನಮ್ಮ ಸರಿಯಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು.