ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ನೀಡಿರುವ ನೋಟಿಸ್ ನಿರೂಪಕಿ ಅನುಶ್ರೀ ಸ್ವೀಕರಿಸಿದ್ದಾರೆ. ಶನಿವಾರ ವಿಚಾರಣೆಗೆ ಹಾಜರಾಗೋದಾಗಿ ಅನುಶ್ರೀ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ಹಿನ್ನೆಲೆ ಅನುಶ್ರೀ ಅವರು ನಾಳೆ ಮಂಗಳೂರಿಗೆ ತೆರಳಲಿದ್ದಾರೆ.
ಅನುಶ್ರೀ ಅವರ ವೈಭವ್ ಸ್ನೇಹ ಬ್ರೀಜೆ ಅಪಾರ್ಟ್‍ಮೆಂಟ್ ಗೆ ತೆರಳಿ ನೋಟಿಸ್ ನೀಡಲಾಗಿದೆ. ವಿಚಾರಣೆಗೆ ಹಾಜರಾಗಲು ಮಂಗಳವಾರದವರೆಗೂ ಸಮಯ ನೀಡಲಾಗಿದೆ. ಆದ್ರೆ ಅನುಶ್ರೀಯವರು ನಾಳೆಯೆ ವಿಚಾರಣೆಗೆ ಬರೋದಾಗಿ ತಿಳಿಸಿದ್ದಾರೆ. ಮಂಗಳೂರಿನ ಸಿಸಿಬಿ ಕಚೇರಿಯಲ್ಲಿ ಅನುಶ್ರೀಯವರ ವಿಚಾರಣೆ ನಡೆಯಲಿದೆ.
ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನುಶ್ರೀ, ಇಂದು ಸಂಜೆ ಇಬ್ಬರು ಅಧಿಕಾರಿಗಳು ಬಂದು ನೋಟಿಸ್ ನೀಡಿದರು. ಮಂಗಳವಾರವರೆಗೂ ಸಮಯ ನೀಡಿದ್ದಾರೆ. ಆದ್ರೆ ನಾನು ನಾಳೆಗೆ ಬರುತ್ತೇನೆ ಎಂದು ಹೇಳಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೀವು ಹೇಳಿಕೆ ದಾಖಲಿಸಬೇಕಿದೆ ಎಂದು ಹೇಳಲಾಗಿದ್ದು, ನೋಟಿಸ್ ನಲ್ಲಿ ಯಾವುದೇ ಕೇಸ್ ಅಂತ ನಿಖರವಾಗಿ ತಿಳಿಸಿಲ್ಲ ಎಂದರು. ಇದನ್ನೂ ಓದಿ: ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ
ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಪಾರ್ಟಿಗಳಲ್ಲಿ ಖ್ಯಾತ ನಿರೂಪಕಿ ಭಾಗಿಯಾಗುತ್ತಾರೆ ಎಂದು ಹೇಳಿಕೆ ನೀಡಿದ್ದ. ಇಂದು ಬಂಧನವಾಗಿರುವ ಕಿಶೋರ್ ಆಪ್ತ ತರುಣ್ ವಿಚಾರಣೆ ವೇಳೆ ಅನುಶ್ರೀಯವರ ಹೆಸರು ಹೇಳಿದ್ದಾನೆ ಎನ್ನಲಾಗಿದೆ. ಈ ಇಬ್ಬರ ಹೇಳಿಕೆಯನ್ನಾಧರಿಸಿ ಅನುಶ್ರೀ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಡ್ರಗ್ಸ್ ಕೇಸ್ – ನಿರೂಪಕಿ ಅನುಶ್ರೀಗೆ ನೋಟಿಸ್ ಜಾರಿ