Connect with us

Bengaluru City

ಸಿಸಿಬಿ ನೋಟಿಸ್- ನಿರೂಪಕಿ ಅನುಶ್ರೀ ಮೊದಲ ಪ್ರತಿಕ್ರಿಯೆ

Published

on

ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಜಾರಿ ಹಿನ್ನೆಲೆ ನಿರೂಪಕಿ ಅನುಶ್ರೀ ಪಬ್ಲಿಕ್ ಟಿವಿಗೆ ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ನನಗೆ ಯಾವುದೇ ನೋಟಿಸ್ ಬಂದಿಲ್ಲ. ಯಾವ ನೋಟಿಸ್ ಎಂಬುವುದು ನನಗೆ ಗೊತ್ತಾಗುತ್ತಿಲ್ಲ. ನೀವು ಹೇಳುತ್ತಿರುವ ರೀತಿಯಲ್ಲಿ ಯಾವುದೇ ನೋಟಿಸ್ ತಲುಪಿಲ್ಲ. ನನ್ನ ಮೊಬೈಲಿಗೆ ಸಮನ್ಸ್ ಸಹ ಬಂದಿಲ್ಲ. ಮಂಗಳೂರಿನ ಮನೆಯಲ್ಲಿಯೂ ನಾವು ಯಾರು ಇಲ್ಲ. ಸುದ್ದಿ ಬಿತ್ತರವಾಗುತ್ತಿದ್ದಂತೆ ನಾನು ಮಂಗಳೂರಿನ ಮನೆಯ ಬಳಿ ಕೆಲವರನ್ನ ಕಳಿಸಿ ವಿಚಾರಿಸಿದೆ. ನಾನು, ಅಮ್ಮ ಮತ್ತು ತಮ್ಮ ಬೆಂಗಳೂರಿನಲ್ಲಿಯೇ ಇದ್ದೇನೆ ಎಂದು ಅನುಶ್ರೀ ಹೇಳಿದ್ದಾರೆ.

ಸಿನಿಮಾ ಇಂಡಸ್ಟ್ರಿಗೆ ಬಂದು 14 ವರ್ಷ ಆಗಿದೆ. 12 ವರ್ಷದ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ನಮಗೆ ಕಿಶೋರ್ ಶೆಟ್ಟಿ ಮತ್ತು ತರುಣ್ ಕೊರಿಯೋಗ್ರಾಫರ್ ಆಗಿದ್ದರು. ಅದಾದ ಬಳಿಕ ಇಬ್ಬರ ಜೊತೆಗೆ ಸಂಪರ್ಕ ಬಂದಿಲ್ಲ. ಮೂರು ವರ್ಷದ ಹಿಂದೆ ಬಂಧಿತರ ಡ್ಯಾನ್ಸ್ ಸ್ಕೂಲ್ ಉದ್ಘಾಟನೆ ಮಾಡಿಕೊಟ್ಟಿದ್ದೇನೆ. ಲಾಕ್‍ಡೌನ್ ವೇಳೆ ಇಪ್ಪತ್ತೈದು ದಿನ ಮಂಗಳೂರಿನಲ್ಲಿ ಲಾಕ್ ಆಗಿದ್ದೆ. ನಂತರ ಅನುಮತಿ ಪಡೆದು ಕಾರ್ ಡ್ರೈವ ಮಾಡಿಕೊಂಡು ಬಂದಿದ್ದೇನೆ. ಮಂಗಳೂರಿಗೆ ಹೋದ್ರು ಮನೆ ಮತ್ತು ದೇವಸ್ಥಾನಕ್ಕೆ ಮಾತ್ರ ಹೋಗುತ್ತೇನೆ. ಲಾಕ್‍ಡೌನ್ ನಲ್ಲಿಯೂ ನಾನು ಮನೆಯಲ್ಲಿದ್ದೇನೆ. ಈ ಬಗ್ಗೆ ನೀವು ಯಾರನ್ನಾದರೂ ಕೇಳಿ ಎಂದು ಹೇಳಿದರು.

ಒಂದು ವೇಳೆ ವಿಚಾರಣೆಗೆ ಹಾಜರಾಗಬೇಕೆಂದು ಅಂದಾಗ ಖಂಡಿತ ಹೋಗುತ್ತೇನೆ. ಪೊಲೀಸರ ತನಿಖೆಗೆ ಸಹಕರಿಸೋದು ನನ್ನ ಕರ್ತವ್ಯ ಆಗಿರುತ್ತದೆ. ತಾಯಿ ಮತ್ತು ತಮ್ಮ ಮನೆಯಲ್ಲಿ ಟಿವಿ ನೋಡುತ್ತಿದ್ದಾರೆ. ಮಗಳ ಮೇಲೆ ಅವರಿಗೆ ನಂಬಿಕೆ ಇಲ್ಲ ಅಂತ ಅಲ್ಲ. ಜನ ಹೇಗೆ ನೋಡುತ್ತಾರೆ ಅನ್ನೋ ಚಿಂತೆ ಅವರ ಮುಖದಲ್ಲಿ ಕಾಣಿಸುತ್ತಿದೆ. ಕಾರ್ಯಕ್ರಮಗಳಿಗೆ ಹೋಗುವುದು ನನ್ನ ಕೆಲಸ. ಆದ್ರೆ ಎಷ್ಟೋ ಜನರನ್ನು ಭೇಟಿ ಆಗುತ್ತಿರುತ್ತೇವೆ. ಅಲ್ಲಿ ಬಂದರೋರು ನಮಗೆ ಪರಿಚಯ ಇರಬೇಕು ಅಂತೇನಿಲ್ಲ ಎಂದು ತಿಳಿಸಿದರು.

ಮಂಗಳೂರು ಸಿಸಿಬಿ ಪೊಲೀಸರ ಬಂಧನದಲ್ಲಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ಮತ್ತು ಆತನ ಆಪ್ತ ತರುಣ್ ಹೇಳಿಕೆಯನ್ನಾಧರಿಸಿ ಅನುಶ್ರೀ ಅವರಿಗೆ ವಾಟ್ಸಪ್ ಮೂಲಕ ನೋಟಿಸ್ ನೀಡಿದೆ ಎಂದು ತಿಳಿದು ಬಂದಿದೆ.

ಸಿಸಿಬಿ ಬಂಧನದಲ್ಲಿರುವ ಕಿಶೋರ್ ಶೆಟ್ಟಿ, ತರುಣ್ ವಿಚಾರಣೆ ವೇಳೆ ಮಹತ್ವದ ವಿಷಯಗಳು ಬಯಲಿಗೆ ಬಂದಿವೆ. ಇಂದು ಬಂಧನವಾಗಿರುವ ತರುಣ್ ಜೊತೆ ಅನುಶ್ರೀ ನಿರಂತರ ಸಂಪರ್ಕದಲ್ಲಿದ್ದರು. ಅನುಶ್ರೀ ಡ್ರಗ್ಸ್ ಪೆಡ್ಲರ್ ಗಳ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಅನ್‍ಲಾಕ್ ಬಳಿಕ ಮಂಗಳೂರಿಗೆ ತೆರಳಿದ್ದ ಅನುಶ್ರೀ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿರುವ ಬಗ್ಗೆ ಮಹತ್ವದ ಸಾಕ್ಷ್ಯ ಲಭ್ಯವಾಗಿದೆ ಎನ್ನಲಾಗಿದೆ.

ಮಂಗಳೂರಿನ ಸಿಸಿಬಿ ಪೊಲೀಸರ ಒಂದು ತಂಡ ಇಂದು ಸಂಜೆ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದೆ. ಬೆಂಗಳೂರು ಮತ್ತು ಮಂಗಳೂರು ಪೊಲೀಸರ ನೇತೃತ್ವದಲ್ಲಿ ಅನುಶ್ರೀ ಅವರನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ. ಎರಡು ದಿನಗಳ ಹಿಂದೆ ಕಿಶೋರ್ ಶೆಟ್ಟಿಯ ಮಣಿಪುರ ಮೂಲದ ಗೆಳತಿಯನ್ನ ಸಹ ಪೊಲೀಸರು ಬಂಧಿಸಿದ್ದಾರೆ. ಕಿಶೋರ್ ಶೆಟ್ಟಿ ಗೆಳತಿ ಮಂಗಳೂರಿನ ಸ್ಪಾನಲ್ಲಿ ಕೆಲಸ ಮಾಡಿಕೊಂಡಿದ್ದಳು. ಕಿಶೋರ್ ಶೆಟ್ಟಿ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ತನ್ನ ಗೆಳೆಯ, ಗೆಳತಿಯರನ್ನ ಕರೆ ತರುತ್ತಿದ್ದಳು.

ಸೆಪ್ಟೆಂಬರ್ 19ರಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಶೆಟ್ಟಿ ಸಹಿತ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಂಧಿತರಿಂದ ಎಂಡಿಎಂ ಪೌಡರ್, ಬೈಕ್, 2 ಮೊಬೈಲ್ ಫೋನ್ ಸೇರಿದಂತೆ 1 ಲಕ್ಷ ಮೌಲ್ಯದ ವಸ್ತು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಆರೋಪಿಗಳು ಮುಂಬೈಯಿಂದ ವಸ್ತುಗಳನ್ನು ಖರೀದಿಸಿ ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು. ಇಬ್ಬರ ಮೇಲೆ ಸೇವನೆ ಮತ್ತು ಮಾರಾಟ ಎರಡೂ ಪ್ರಕರಣ ದಾಖಲಾಗಿದೆ.

ಆರೋಪಿ ಅಕೀಲ್ ನೌಶೀಲ್ ಈ ಹಿಂದೆ ವಿದೇಶದಲ್ಲಿ ಸೇಫ್ಟಿ ಆಫೀಸರ್ ಆಗಿದ್ದ. ಒಂದು ವರ್ಷದ ಊರಿಗೆ ಬಂದಿದ್ದ ಈತ, ಕಿಶೋರ್ ಅಮನ್ ಶೆಟ್ಟಿ ಜೊತೆ ಡ್ಯಾನ್ಸರ್, ಕೋರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಅಲ್ಲದೆ ಅಕೀಲ್ ನೌಶೀಲ್ ಜೊತೆ ಸೇರಿ ಮಾದಕ ವಸ್ತು ಖರೀದಿಸಿ ಮಾರಾಟ ಮಾಡುತ್ತಿದ್ದ. ಬೆಂಗಳೂರು, ಮುಂಬೈಯಿಂದ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳಿದ್ದಾರೆ. ಇವರ ಚೈನ್ ಲಿಂಕ್ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದರು.

Click to comment

Leave a Reply

Your email address will not be published. Required fields are marked *