– ನೀರಲ್ಲಿ ತೇಲಾಡಿದ ಮದುವೆ ಆಹಾರ ಪದಾರ್ಥ, ಅಡುಗೆ ಸಾಮಗ್ರಿ
– ಅಂಡರ್ ಪಾಸ್ ಜಲಾವೃತ, ವಾಹನ ಸವಾರರ ಪರದಾಟ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಹಲವೆಡೆ ಧಾರಾಕಾರ ಮಳೆಯಾಗಿ ಅವಾಂತರಗಳನ್ನು ಸೃಷ್ಟಿಸಿದೆ. ಕೆ.ಆರ್.ಮಾರ್ಕೆಟ್ ರಸ್ತೆಗಳು ಕೆರೆಯಂತಾದರೆ, ರಾಜರಾಜೇಶ್ವರಿ ನಗರದಲ್ಲಿ ಮದುವೆ ಸಂಭ್ರಮದಲ್ಲಿದ್ದವರಿಗೆ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿ ಆಘಾತವನ್ನುಂಟು ಮಾಡಿದೆ.
ನಗರದ ಮಲ್ಲೇಶ್ವರ, ಶಾಂತಿನಗರ, ಜಯನಗರ, ಯಶವಂತಪುರ, ನಂದಿನಿ ಲೇಔಟ್, ಕೆ.ಆರ್.ಮಾರ್ಕೆಟ್, ಬನಶಂಕರಿ, ಬಸವನಗುಡಿ, ಹೆಬ್ಬಾಳ, ಶೇಷಾದ್ರಿಪುರಂ, ಶಿವಾನಂದ ಸರ್ಕಲ್ ಸೇರಿದಂತೆ ಹಲವಡೆ ರಾತ್ರಿಯಿಡೀ ಭಾರೀ ಮಳೆ ಸುರಿದಿದೆ. ಇದರಿಂದಾಗಿ ಸಿಲಿಕಾನ್ ಸಿಟಿಯ ಬಹುತೇಕ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಸಂಜೆ ಹಾಗೂ ರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಡುತ್ತಿದ್ದವರಿಗೆ ಮಳೆ ಆಘಾತವನ್ನುಂಟು ಮಾಡಿದೆ. ಮಳೆಯಲ್ಲಿ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ.
ಸಂಜೆಯಿಂದ ಸುರಿದ ಮಳೆಯಿಂದಾಗಿ ಮದುವೆ ಸಂಭ್ರಮದಲ್ಲಿದ್ದವರಿಗೆ ಕಿರಿಕಿರಿಯುಂಟಾಗಿದ್ದು, ರಾಜರಾಜೇಶ್ವರಿ ನಗರದ ಮೀನಾಕ್ಷಿ ಕಲ್ಯಾಣ ಮಂಟಪಕ್ಕೆ ನೀರು ನುಗ್ಗಿದೆ. ಕಲ್ಯಾಣ ಮಂಟಪ ಸಂಪೂರ್ಣ ಜಲಾವೃತವಾಗಿದ್ದು, ಆಹಾರ ಸಾಮಾಗ್ರಿಗಳು, ಖುರ್ಚಿಗಳು, ಗ್ಯಾಸ್ ಸಿಲಿಂಡರ್ ಗಳು ನೀರಲ್ಲೇ ತೇಲಾಡುತ್ತಿದ್ದವು. ಹಲಗೆ ಒಡೆಯರ ಹಳ್ಳಿಯ ಕೆರೆಯಿಂದ ಕೆಂಚೆನಹಳ್ಳಿಗೆ ಸೇರುವ ರಾಜಕಾಲುವೆಯ ನೀರು ಕಲ್ಯಾಣ ಮಂಟಪಕ್ಕೆ ನುಗ್ಗಿದರ ಪರಿಣಾಮ ಕಲ್ಯಾಣ ಮಂಟಪ ಜಲಾವೃತಗೊಂಡು ಅಡುಗೆ ಮನೆ ಸಂಪೂರ್ಣ ಜಲಾವೃತವಾಗಿದೆ. ಕಲ್ಯಾಣ ಮಂಟಪದಲ್ಲಿ ಮದುವೆ ರಿಸೆಪ್ಷನ್ ನಡೆಯುತ್ತಿದ್ದಾಗ ನೀರು ನುಗ್ಗಿದ್ದರಿಂದ ಅವಾಂತರ ಸೃಷ್ಟಿಯಾಗಿದೆ. ಊಟದ ಹಾಲ್, ಮಂಟಪದ ಮುಂಭಾಗ ಪೂರ್ತಿ ಜಾಲಾವೃತವಾಗಿದ್ದು, ವಿವಾಹಕ್ಕೆ ಬಂದವರ ಕಾರುಗಳು ನೀರಲ್ಲಿ ಮುಳುಗಿವೆ.
ಕೆ.ಆರ್.ಮಾರ್ಕೆಟ್ ರಸ್ತೆಗಳು ಕೆರೆಯಂತಾಗಿ ಪರದಾಡಿದ್ದು, ರಸ್ತೆಯಲ್ಲಿ ವಾಹನ ಸವಾರರು ಕಂಗಾಲಾಗಿದ್ದಾರೆ. ಮಳೆಯಿಂದಾಗಿ ಶಿವಾನಂದ ಸರ್ಕಲ್ ನ ಅಂಡರ್ ಪಾಸ್ ಜಾಲವೃತಗೊಂಡಿತ್ತು. ಅಂಡರ್ ಪಾಸ್ ನಲ್ಲಿ 2 ಅಡಿಗೂ ಹೆಚ್ಚು ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.
ಇನ್ನೂ ಮೂರು ದಿನ ಮಳೆ
ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಭಾರೀ ಮಳೆ ಆಗಲಿದೆ. 5.8 ಕಿ.ಮೀ. ವೇಗದಲ್ಲಿ ಮೋಡಗಳು ಸಂಚರಿಸುತ್ತಿವೆ. ಶಿವಮೊಗ್ಗದ, ಧಾರವಾಡ, ದಾವಣಗೆರೆ, ತುಮಕೂರು, ಕೊಪ್ಪಳ, ಬಾಗಲಕೋಟೆ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಅಕ್ಟೋಬರ್ 21, 22 ರಂದು ಹಳದಿ ಅಲರ್ಟ್ ಇರಲಿದೆ ಎಂದು ಎಚ್ಚರಿಸಿದ್ದಾರೆ.
ಉತ್ತರ ಒಳನಾಡಿನಲ್ಲಿ ಅಕ್ಟೋಬರ್ 20-23 ವರೆಗೂ ಭಾರೀ ಮಳೆ ಆಗಲಿದೆ. ಅಕ್ಟೋಬರ್ 23-24ರಂದು ದಕ್ಷಿಣ ಒಳನಾಡು ಪ್ರದೇಶದಲ್ಲಿ ವರುಣ ಅಬ್ಬರಿಸಲಿದ್ದಾನೆ. ಈಗಾಗಲೇ ಮಸ್ಕಿಯಲ್ಲಿ 7 ಸೆಂ.ಮೀ., ಚಿಂತಾಮಣಿಯಲ್ಲಿ 6, ಶಿರಹಟ್ಟಿಯಲ್ಲಿ 3 ಸೆಂ.ಮೀ, ಮಳೆ ದಾಖಲಾಗಿದೆ. ಬೆಂಗಳೂರಿನಲ್ಲಿ ಇಂದು ಹಾಗೂ ನಾಳೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಪ್ರಾದೇಶಿಕ ವಿಭಾಗದ ನಿರ್ದೇಶಕ ಸಿ.ಎಸ್.ಪಾಟೀಲ್ ತಿಳಿಸಿದ್ದಾರೆ.