ಬೆಂಗಳೂರು: ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದರು. ಇದರ ಬೆನ್ನಲ್ಲೇ ಇಂದು ನಂಜಾವದೂತ ಸ್ವಾಮೀಜಿ ಡಿಕೆಶಿಯನ್ನು ಭೇಟಿ ಮಾಡಿದ್ದಾರೆ.
ಸ್ಪಟಿಕಪುರ ಮಠದ ನಂಜಾವದೂತ ಸ್ವಾಮೀಜಿ ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ಮನೆಗೆ ಬಂದಿದ್ದು, ಡಿಕೆಶಿಯನ್ನು ಭೇಟಿ ಮಾಡಿದ್ದಾರೆ. ಸಿಬಿಐ ದಾಳಿ ಮರುದಿನವೇ ಸ್ವಾಮೀಜಿ ಭೇಟಿಯಾಗಿದ್ದಾರೆ. ಈ ವೇಳೆ ನಂಜಾವದೂತ ಸ್ವಾಮೀಜಿ ಜೊತೆ ಕೆಲ ಕಾಲ ಮಾತನಾಡಿದ್ದಾರೆ.
Advertisement
Advertisement
ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ಅಧಿಕಾರಿಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಬುಲಾವ್ ನೀಡಿದ್ದಾರೆ. ನಿನ್ನೆ ದಾಳಿ ಮುಕ್ತಾಯವಾದ ಬಳಿಕ ಅಧಿಕಾರಿಗಳು ಸಮನ್ಸ್ ನೀಡಿದ್ದಾರೆ. ಇನ್ನೆರಡು ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಹೀಗಾಗಿ ಕನಕಪುರ ಬಂಡೆ ಇಂದು ಬೆಳಗ್ಗೆ 11 ಗಂಟೆಗೆ ಡಿಕೆಶಿ ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.
Advertisement
Advertisement
ಸೋಮವಾರ ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಡಿಕೆ ಬ್ರದರ್ಸ್ ಗೆ ಶಾಕ್ ನೀಡಿದ್ದರು. ಏಕಕಾಲದಲ್ಲಿ 14 ಕಡೆ ಸುಮಾರು 60ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ದಾಳಿ ನಡೆಸಿದ್ದರು. ದಾಳಿಯ ವೇಳೆ 57 ಲಕ್ಷ ಹಣ ಹಾಗೂ ಕೆಲವೊಂದು ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ಮತ್ತೊಂಡೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸಿಬಿಐ ದಾಳಿಗೆ ಕಾರಣ ಅಂತ ಡಿ.ಕೆ ಶಿವಕುಮಾರ್ ನೇರ ಆರೋಪ ಮಾಡಿದ್ದಾರೆ. ಸಿಬಿಐಗೆ ಅನುಮತಿ ಕೊಡೋದು ಬೇಡ. ಇದರ ಬಗ್ಗೆ ಐಟಿ, ಸಿಐಡಿ ತನಿಖೆ ನಡೆಸಬಹುದು ಅಂತ ಅಡ್ವೋಕೇಟ್ ಜನರಲ್ ತಿಳಿಸಿದರು ಕೂಡ ಸರ್ಕಾರ ಅದ್ಯಾರ ಒತ್ತಡದಿಂದ್ಲೋ ಏನೋ, ಸಿಬಿಐ ತನಿಖೆಗೆ ಅನುಮತಿ ಕೊಟ್ಟಿದೆ. ಮುಖ್ಯಮಂತ್ರಿಗಳೇ ನನಗೆ ಎಷ್ಟು ಕಿರುಕುಳ ಕೊಡಬೇಕೋ ಕೊಟ್ಟಿದ್ದೀರಿ ಎಂದಿದ್ದಾರೆ.