ಮೈಸೂರು: ಕನ್ನಡದ ‘ದೃಶ್ಯ’ ಸಿನಿಮಾದ ಪ್ರೇರಣೆಯಿಂದ ಕುಡಿದು ಬಂದು ಕಿರುಕುಳ ಕೊಡುತ್ತಿದ್ದ ಪತಿಯನ್ನ ಪ್ರಿಯಕರನ ಮೂಲಕ ಪತ್ನಿಯೇ ಕೊಲೆ ಮಾಡಿಸಿ ತಪ್ಪಿಸಿಕೊಳ್ಳಲು ಪ್ಲಾನ್ ಮಾಡಿದ್ದ ಪ್ರಕರಣ ಮೈಸೂರಲ್ಲಿ ಬಯಲಾಗಿದೆ.
ಆರೋಪಿಗಳನ್ನು ಬಾಬು ಹಾಗೂ ಶಾರದ ಎಂದು ಗುರುತಿಸಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕು ಸಾಲಿಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿ ಪ್ರತಿ ದಿನ ಕುಡಿದು ಬಂದು ಕಿರುಕುಳ ನೀಡುತ್ತಿದ್ದ ಪತಿಯನ್ನ ಪ್ರಿಯಕರನ ಜೊತೆ ಸೇರಿ ಪತ್ನಿ ಕೊಲೆ ಮಾಡಿಸಿದ್ದಾಳೆ.
ಜೂನ್ 23 ರಂದು ಸಾಲಿಗ್ರಾಮದ ಚುಂಚನಕಟ್ಟೆ ಮುಖ್ಯ ರಸ್ತೆ ಬಳಿ ಆನಂದನ ಮೃತ ದೇಹ ಪತ್ತೆಯಾಗಿತ್ತು. ಅಪಘಾತದಲ್ಲಿ ಮೃತಪಟ್ಟಂತೆ ಸನ್ನಿವೇಶ ಸೃಷ್ಟಿಸಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಸಾಲಿಗ್ರಾಮ ಪೊಲೀಸರು, ಪತ್ನಿ ಶಾರದಾಳನ್ನ ವಿಚಾರಣೆಗೆ ಒಳಪಡಿಸಿದಾಗ ಸಂಚು ಬಯಲಾಗಿದೆ.
ಹಲವು ದಿನಗಳಿಂದ ಪ್ರಿಯಕರ ಬಾಬು ಜೊತೆ ಅಕ್ರಮ ಸಂಭಂದ ಇಟ್ಟುಕೊಂಡಿದ್ದ ಶಾರದ ತನ್ನ ಪತಿಯನ್ನ ಮುಗಿಸಲು ಸ್ಕೆಚ್ ಹಾಕಿದ್ದಾಳೆ. ದೃಶ್ಯ ಸಿನಿಮಾದ ಪ್ರೇರಣೆಯಿಂದ ಪ್ಲಾನ್ ಸಿದ್ಧಪಡಿಸಿದ್ದಾರೆ. ಆನಂದ್ ನ ಕೊಲೆ ಮಾಡಿ ಮೃತದೇಹವನ್ನ ರಸ್ತೆ ಬದಿ ಬಿಸಾಡಿದ್ದರು. ಅಪಘಾತದಲ್ಲಿ ಮೃತಪಟ್ಟಂತೆ ಆರೋಪಿಗಳಿಂದ ಸನ್ನಿವೇಶ ಸೃಷ್ಟಿ ಮಾಡಿದ್ದರು.