– ಬುದ್ಧ ಜಗತ್ತಿಗೆ ಪ್ರೇರಣೆ, ಸಿದ್ದಾರ್ಥ್ ಹೆಗ್ಡೆ ಯುವಕರಿಗೆ ಆದರ್ಶ
ಚಿಕ್ಕಮಗಳೂರು: ಕಾಫಿ ಡೇ ಮಾಲೀಕ ದಿವಂಗತ ಸಿದ್ಧಾರ್ಥ್ ಹೆಗ್ಡೆ ಅವರ ಸಮಾಧಿ ಬಳಿ ಅವಧೂತ ವಿನಯ್ ಗುರೂಜಿ ಅರಳಿ ಗಿಡ ಹಾಗೂ ಬೋಧಿ ವೃಕ್ಷ ನೆಟ್ಟು ಸಿದ್ಧಾರ್ಥ್ ಹೆಗ್ಡೆ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಬೇಡಿಕೊಂಡಿದ್ದಾರೆ.
ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರಪುರದ ಗೌರಿಗದ್ದೆ ಗ್ರಾಮದ ಸ್ವರ್ಣಪೀಠಿಕೇಶ್ವರಿ ದತ್ತಾಶ್ರಮದ ಅವಧೂತ ವಿನಯ್ ಗುರೂಜಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಿದ್ಧಾರ್ಥ್ ಹೆಗ್ಡೆ ಅವರ ಸ್ವಗ್ರಾಮ ಚೇತನಹಳ್ಳಿ ಎಸ್ಟೇಟ್‍ಗೆ ಭೇಟಿ ನೀಡಿದ್ದರು.
ಭಾನುವಾರ ವಾಮನ ಜಯಂತಿ ದಿನ ಅಂದರೆ ವಿಷ್ಣು ವಾಮನ ಅವತಾರ ತಾಳಿದ ದಿನ. ಹಾಗಾಗಿ ನಿನ್ನೆ ಚೇತನಹಳ್ಳಿ ಎಸ್ಟೇಟ್ ಗೆ ಭೇಟಿ ನೀಡಿದ್ದ ವಿನಯ್ ಗುರೂಜಿ, ಲಕ್ಷಾಂತರ ಜನರ ಬದುಕಿಗೆ ದಾರಿ ದೀಪವಾಗಿದ್ದ ಸಿದ್ಧಾರ್ಥ್ ಹೆಗ್ಡೆ ಮತ್ತೊಮ್ಮೆ ಹುಟ್ಟಿ ಬರಲೆಂದು ಅದೇ ದಿನ ಅವರ ಸಮಾಧಿ ಬಳಿ ಅರಳಿ ಗಿಡ ನೆಟ್ಟಿದ್ದಾರೆ. ಇದೇ ವೇಳೆ, ಬುದ್ಧ ಇಡೀ ಪ್ರಪಂಚಕ್ಕೆ ಪ್ರೇರಣೆ, ಸಿದ್ಧಾರ್ಥ್ ಹೆಗ್ಡೆ ಯುವಕರಿಗೆ ಆದರ್ಶ ಎಂದು ಬುದ್ಧನಿಗೆ ಜ್ಞಾನೋದಯವಾದ ಬೋಧಿ ವೃಕ್ಷವನ್ನೂ ನೆಟ್ಟಿದ್ದಾರೆ.
ಈ ವೇಳೆ ಸಿದ್ಧಾರ್ಥ್ ಹೆಗ್ಡೆ ತಾಯಿ ವಾಸಂತಿ ಹೆಗ್ಡೆ ಹಾಗೂ ಆಪ್ತರಷ್ಟೇ ಭಾಗಿಯಾಗಿದ್ದರು. ಗಿಡ ನೆಡುವ ಮುನ್ನ ತಿರುಪತಿಯಿಂದ ತಂದಿದ್ದ ಮೂಲ ಮಂತ್ರಾಕ್ಷತೆಯನ್ನು ಹಾಕಿದ ವಿನಯ್ ಗುರೂಜಿ ಅದೇ ಜಾಗದಲ್ಲಿ ಅರಳಿ ಗಿಡ ಹಾಗೂ ಬೋಧಿ ವೃಕ್ಷವನ್ನು ನೆಟ್ಟಿದ್ದಾರೆ. ಸಿದ್ಧಾರ್ಥ್ ಹೆಗ್ಡೆ ಅವರ ಫ್ಯಾಮಿಲಿ ವಿನಯ್ ಗುರೂಜಿಯ ಪರಮ ಭಕ್ತ ಕುಟುಂಬ. ಇದೇ ವೇಳೆ ಯಾರಿಗೂ ನೋವು ನೀಡದ ಜೀವ ಸಿದ್ಧಾರ್ಥ್ ಹೆಗ್ಡೆಯನ್ನು ವಿನಯ್ ಗುರೂಜಿ ನೆನೆದಿದ್ದಾರೆ.