ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಮಾಡಿದಷ್ಟು ಭ್ರಷ್ಟಾಚಾರ ಇತಿಹಾಸದಲ್ಲಿಯೇ ಯಾರು ಮಾಡಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಭಾಗಿಯಾಗುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಣ್ಣ ಬೃಹತ್ ಅರ್ಕಾವತಿ ಘಟನೆ ಮುಚ್ಚಿ ಹಾಕಿದ್ದಾರೆ. ಅವರ ಅವಧಿಯಲ್ಲಿ ನಡೆದಿರುವಷ್ಟು ಭ್ರಷ್ಟಾಚಾರವನ್ನು ಯಾವ ಸರ್ಕಾರ ಮಾಡಲು ಸಾಧ್ಯವಿಲ್ಲ. ಹಿಂದೆಯೂ ಮಾಡಿಲ್ಲ. ಮುಂದೆ ಸಹ ಮಾಡೋದು ಅಸಾಧ್ಯ ಎಂದಿದ್ದಾರೆ.
ಇತ್ತೀಚೆಗಷ್ಟೇ ಸಿದ್ದರಾಮಯ್ಯನವರು ತಾಕತ್ತಿದ್ದರೆ ದಲಿತ ಸಿಎಂ ಮಾಡಲಿ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವಾಗಿ ಮಾತನಾಡಿದ ಅವರು, ಈ ದೇಶದಲ್ಲಿ ಅತೀ ಹೆಚ್ಚು ಅವಧಿ ಅಧಿಕಾರ ನಡೆಸಿರುವ ಕಾಂಗ್ರೆಸ್ ಪಕ್ಷ ಅಂಬೇಡ್ಕರ್‍ಗೆ ಅವಮಾನ ಮಾಡಿದೆ. ದೇಶದ ಮೊದಲ ಸಚಿವ ಸಂಪುಟದಲ್ಲಿ ನೋವಾಗಿ ಅಂಬೇಡ್ಕರ್ ರಾಜೀನಾಮೆ ನೀಡಿದ್ದರು. ಲೋಕಸಭೆ ಚುನಾವಣೆಗೆ ನಿಂತಾಗ ಅಂಬೇಡ್ಕರ್‍ರನ್ನು ಈ ಕಾಂಗ್ರೆಸ್ಸಿಗರು ಸೋಲಿಸಿದರು. ಅಲ್ಲದೇ 2ನೇ ಬಾರಿ ಅಂಬೇಡ್ಕರ್ ಅವರ ಸಹಾಯಕನನ್ನು ಅವರ ಎದುರೇ ನಿಲ್ಲಿಸಿ ಸೋಲಿಸಿದ್ದರು. ಅಲ್ಲದೇ ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೂ ಜಾಗ ಕೊಡಲಿಲ್ಲ. ಹಾಗೆಯೇ ಸಂವಿಧಾನ ಶಿಲ್ಪಿ ಅಂಬೇಡ್ಕರ್‍ಗೆ ಭಾರತ ರತ್ನ ಕೂಡ ಕೊಡಲಿಲ್ಲ. ಆದರೆ ಅಂಬೇಡ್ಕರ್ ಗೆ ಭಾರತ ರತ್ನ ಕೊಟ್ಟಿದ್ದು ನಾವು ಎಂದು ಹುಬ್ಬೇರಿಸಿ ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಪಕ್ಷ ಜಗಜೀವನ್ ರಾಮ್‍ರಂತವರನ್ನು ಪ್ರಧಾನಿ ಮಾಡಲಿಲ್ಲ. ಸಿದ್ದರಾಮಣ್ಣನ ಇತಿಹಾಸ ಹೇಳಬೇಕೆಂದರೆ ಕಾಂಗ್ರೆಸ್ ಗೆ ಬಂದು ಅವರು ಸಿಎಂ ಆದರು. ಆದರೆ ಪರಮೇಶ್ವರ್ ಅವರನ್ನು ಮಾತ್ರ ಡಿಸಿಎಂ ಮಾಡಲಿಲ್ಲ. ಬದಲಾಗಿ ಚುನಾವಣೆಯಲ್ಲಿ ಸೋಲಿಸಿದರು. ಅಲ್ಲದೇ ದಲಿತ ನಾಯಕರಾದ ಖರ್ಗೆ, ಚಂದ್ರಪ್ಪ, ಧ್ರುವನಾರಾಯಣ, ಖರ್ಗೆ ಸೇರಿದಂತೆ ಅನೇಕ ಮುಖಂಡರನ್ನು ಸಿದ್ದರಾಮಯ್ಯ ಸೋಲಿಸಿದರು. ಇಂದಿಗೂ ಖರ್ಗೆ ಹಾಗೂ ಪರಮೇಶ್ವರ್ ಅವರನ್ನು ಮುಂದಕ್ಕೆ ಬರಲು ಸಿದ್ದರಾಮಯ್ಯ ಬಿಡಲ್ಲ ಎಂದು ಆರೋಪಿಸಿದ್ದಾರೆ.
ಬಿಜೆಪಿ ಕಡಿಮೆ ಸಮಯ ಅಧಿಕಾರ ನಡೆಸಿದ್ದರು ಸಹ ಮುಸ್ಲಿಂ ರಾಷ್ಟ್ರಪತಿ ಅಬ್ದುಲ್ ಕಲಾಂರನ್ನು ನಾವು ಮಾಡಿದ್ದೇವೆ. ದಲಿತರಾದ ರಾಮನಾಥ್ ಕೋವಿಂದ್‍ರನ್ನು ರಾಷ್ಟ್ರಪತಿ ಮಾಡಿದ್ದೇವೆ. ಗೋವಿಂದ್ ಕಾರಜೋಳರನ್ನು ಡಿಸಿಎಂ ಮಾಡಿದ್ದೇವೆ. ಜೊತೆಗೆ ಆನೇಕಲ್ ವಿಧಾನಸಭೆಯಲ್ಲಿ ಸೋತ ಎ.ನಾರಾಯಣಸ್ವಾಮಿಗೆ ಚಿತ್ರದುರ್ಗದಲ್ಲಿ ಸಂಸದರನ್ನಾಗಿಸಿದ್ದೂ, ಎ.ನಾರಾಯಣಸ್ವಾಮಿಗೆ ಕೇಂದ್ರದ ಮಂತ್ರಿ ಸಹ ಮಾಡಿದ್ದೇವೆ. ಹೀಗಾಗಿ ಯಾರು ದಲಿತರ ವಿರೋಧಿಗಳೆಂದು ಸಿದ್ದರಾಮಯ್ಯ ತಿಳಿಯಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯಾಧ್ಯಕ್ಷರ ಆಡಿಯೋ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಹೆಸರಿನ ಫೇಕ್ ಆಡಿಯೋ ಪ್ರಕರಣ ತನಿಖೆ ನಡೆಯುತ್ತಿದೆ. ಈ ಬಗ್ಗೆ ಏನು ಮಾತನಾಡಲ್ಲ ಎಂದು ಮಾತನಾಡಲು ಹಿಂದೇಟು ಹಾಕಿದರು. ಜೊತೆಗೆ ಬಿಜೆಪಿಗೆ ಬಂದಿರುವವರೆಲ್ಲಾ ನಮ್ಮ ಸದಸ್ಯರು. ಹೀಗಾಗಿ ನಮ್ಮಲ್ಲಿ ಮಿತ್ರ ಮಂಡಳಿ ಹಾಗೂ ವಲಸಿಗ ಪದ ಸರಿಯಲ್ಲ. ಅವರೆಲ್ಲರೂ ಬಿಜೆಪಿಯಿಂದ ಗೆದ್ದು, ಶಾಸಕರಾಗಿದ್ದಾರೆ. ಪಕ್ಷದ ಒಂದು ಮಂಡಳಿ ರಾಷ್ಟ್ರೀಯ ನಾಯಕರ ಸೂಚನೆ ಪಾಲಿಸುವುದಾಗಿ ಸಿಎಂ ಬಿಎಸ್ ವೈ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನಡೆದಿರುವ ಅವಘಡಗಳ ಸ್ಥಳಕ್ಕೆ ಸಿಎಂ ಯಡಿಯೂರಪ್ಪ ಈಗಾಗಲೇ ನೆರೆ ವೀಕ್ಷಣೆ, ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲಾ ಉಸ್ತುವಾರಿಗಳಿಗೆ ಅವರ ಜಿಲ್ಲೆಗಳಿಗೆ ತೆರಳಲು ಸೂಚಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಒಂದು ತಿಂಗಳು ಬಿಎಸ್‍ವೈಯೇ ಸಿಎಂ ಆಗಿ ಮುಂದುವರಿದ್ರೆ ಒಳ್ಳೆಯದು: ‘ಕೈ’ ಶಾಸಕಿ ನಿಂಬಾಳ್ಕರ್