ಮಡಿಕೇರಿ : ಆಹಾರ ನನ್ನ ಹಕ್ಕು, ತಿನ್ನಬೇಕು ಎನಿಸಿದರೆ ಗೋಮಾಂಸವನ್ನು ನಾನು ತಿನ್ನುತ್ತೇನೆ ಎನ್ನುವ ವಿಪಕ್ಷ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ನನ್ನ ಎದುರಿಗೆ ತಿನ್ನಲಿ, ತಿಂದು ತೋರಿಸಲಿ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ ಚವ್ಹಾಣ್ ಸವಾಲು ಎಸೆದಿದ್ದಾರೆ.
Advertisement
ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಜಾರಿಗೆ ಸಂಬಂಧಿಸಿದಂತೆ ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಚೌವ್ಹಾಣ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಈ ವೇಳೆ ತಿನ್ನುವುದಾದರೆ ಗೋಮಾಂಸ ಕೊಡಿಸೋಣ, ಆದರೆ ನನ್ನ ಎದುರಿಗೆ ತಿಂದು ತೋರಿಸಲಿ ಎಂದು ಚಾಲೆಂಜ್ ಮಾಡಿದ್ದಾರೆ.
Advertisement
ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದೇವೆ ಎಂಬ ಒಂದೇ ಕಾರಣಕ್ಕೆ ವಿರೋಧಿಸುತ್ತಾ ಹಾಗೆಲ್ಲಾ ಮಾತನಾಡುವುದು ಸಭ್ಯತನವಲ್ಲ. ಸಿದ್ದರಾಮಯ್ಯ ಅವರ ಮನೆಯಲ್ಲಿ ಗೋವುಗಳಿಲ್ಲವೆ? ಅವರ ಮನೆಯಲ್ಲಿ ಮೇಕೆ ಕುರಿಗಳಿಲ್ಲವೆ ಎಂದು ಪ್ರಶ್ನಿಸಿದ್ದಾರೆ. ಇಚ್ಚೆಇದ್ದರೆ ನಾನೂ ಕೂಡ ಗೋಮಾಂಸ ತಿನ್ನುತ್ತೇನೆ ಎಂದು ಹೇಳುವ ಮೂಲಕ ಜನರನ್ನು ವಿನಾಕಾರಣ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
Advertisement
Advertisement
2010 ರಲ್ಲೇ ನಮ್ಮ ಸಿಎಂ ಈ ಕಾಯ್ದೆಯನ್ನು ಜಾರಿಗೆ ತರಲು ಹೊರಟಿದ್ದರು. ಆದರೆ ಸಿದ್ದರಾಮಯ್ಯ ಅವರು ಅದನ್ನು ಬಿಡಲಿಲ್ಲ. ಅವರ ಕೆಲಸವನ್ನು ಅವರು ಮಾಡಲಿ, ನಮ್ಮ ಕೆಲಸವನ್ನು ನಾವು ಮಾಡುತ್ತೇವೆ. ಯಾವುದೇ ಕಾರಣಕ್ಕೂ ಗೋವುಗಳನ್ನು ಕಸಾಯಿಕಾನೆಗಳಿಗೆ ಹೋಗಲು ಬಿಡುವುದಿಲ್ಲ ಎಂದು ಸಚಿವ ಪ್ರಭು ಬಿ ಚವ್ಹಾಣ್ ಹೇಳಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಯಾರಿಂದಲೂ ವಿರೋಧವಿಲ್ಲ. ಆದರೆ ಜೆಡಿಎಸ್ ಮತ್ತು ಬಿಜೆಪಿಯವರು ರಾಜಕೀಯಕ್ಕಾಗಿ ವಿರೋಧಿಸುತ್ತಿದ್ದಾರೆ ಸರ್ಕಾರದ ಯೋಜನೆಗಳಿಗೆ ವಿರೋಧ ಮಾಡುವುದೇ ಕಾಂಗ್ರೆಸ್ ಮತ್ತು ಜೆಡಿಎಸ್ ನವರ ಕೆಲಸ, ಇದೀಗ ಗೋಹತ್ಯೆ ಕಾಯ್ದೆಯನ್ನು ವಿರೋಧಿಸುವ ಮೂಲಕ ರಾಜಕೀಯ ಮಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರು ಸಂಕ್ರಾಂತಿ ಮತ್ತು ದೀಪಾವಳಿಯಲ್ಲಿ ಗೋವುಗಳ ಪೂಜೆ ಮಾಡುವುದಿಲ್ಲವೇ ಎಂದು ಪ್ರಶ್ನಿಸಿದರು.
ನಮ್ಮ ಸರ್ಕಾರ ಗೋಹತ್ಯೆ ಕಾಯ್ದೆ ಜಾರಿಮಾಡಲು ಬದ್ಧವಾಗಿದ್ದು, ಇದು ನಮ್ಮ ಅಜೆಂಡಾ ಆಗಿದೆ, ನಮ್ಮ ಸಿಎಂ, ಸಚಿವರು, ಶಾಸಕರು ಎಲ್ಲರೂ ಕಾಯ್ದೆ ಜಾರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಈ ಕಾಯ್ದೆಯನ್ನು ನಾವು ಯಶಸ್ವಿಯಾಗಿ ಜಾರಿ ಮಾಡುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು.