– ಬಿಎಸ್‍ವೈ ರಾಜೀನಾಮೆಯ ಪ್ರಶ್ನೆಯೇ ಇಲ್ಲ
ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ರಾಜ್ಯಪಾಲರಿಗೆ, ಹೈಕಮಾಂಡ್‍ಗೆ ಪತ್ರ ಬರೆದ ವಿಷಯವನ್ನು ಮಾಜಿ ಸಿಎಂ ಸಿದ್ದರಾಮಯ್ಯ ರಾಜಕಾರಣ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಅರ್ಜೆಂಟಾಗಿ ಮುಖ್ಯಮಂತ್ರಿ ಆಗಬೇಕಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಲೇವಡಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ರಾಜೀನಾಮೆ ನೀಡಿದರೆ ಮುಖ್ಯಮಂತ್ರಿ ಆಗುತ್ತೀನಿ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಯಡಿಯೂರಪ್ಪ ರಾಜೀನಾಮೆ ನೀಡುವ ಪ್ರಶ್ನೆಯೇ ಬರಲ್ಲ. ಹೀಗಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಭ್ರಮೆ ಇಟ್ಟುಕೊಳ್ಳುವುದು ಬೇಡ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
2018ರ ಚುನಾವಣೆಯಲ್ಲಿ ಜನ ಸಿದ್ದರಾಮಯ್ಯ ಅವರನ್ನು ತಿರಸ್ಕಾರ ಮಾಡಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದರು. ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರು ಎಂದರು. ಬಿಜೆಪಿ ಪಕ್ಷ ಸಂಘಟನಾತ್ಮಕವಾಗಿ ಒಟ್ಟಾಗಿದೆ. ಬಿಜೆಪಿಗೆ ಪ್ರತಿ ಬೂತ್‍ನಲ್ಲೂ ಕಾರ್ಯಕರ್ತರು ಇದ್ದಾರೆ. ಉಪ ಚುನಾವಣೆ ನಡೆಯುತ್ತಿರುವ ಬೆಳಗಾವಿ, ಮಸ್ಕಿ, ಬಸವ ಕಲ್ಯಾಣದಲ್ಲಿ ಈ ಬೂತ್ ಮಟ್ಟದ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿದ್ದಾರೆ. ಪ್ರತಿ ಮತದಾರರನ್ನು ತಲುಪಿದ್ದಾರೆ ಇದನ್ನು ಸಹಿಸಲು ಪ್ರತಿಪಕ್ಷಗಳಿಗೆ ಆಗುತ್ತಿಲ್ಲ ಎಂದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಷ್ಟೊಂದು ಅಭಿವೃದ್ಧಿ ಕೆಲಸ ಮಾಡುತ್ತಿದೆ. ಹೀಗಾಗಿ ಅದರ ಬಗ್ಗೆ ಟೀಕೆ ಮಾಡಲು ಆಗುವುದಿಲ್ಲ. ರಾಜ್ಯ ಸರ್ಕಾರ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುತ್ತಿದೆ. ಅದನ್ನು ಟೀಕೆ ಮಾಡಲು ಸಾಧ್ಯವಿಲ್ಲ. ಅವರ ಕಣ್ಣ ಮುಂದೆ ಇದೊಂದು ಪತ್ರ ಸಿಕ್ಕಿದೆ. ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಅಂತಿದ್ದಾರೆ ಅಷ್ಟೇ. ಕೇಂದ್ರ ಹಾಗೂ ರಾಜ್ಯದಲ್ಲಿ ಒಳ್ಳೆಯ ಸರ್ಕಾರ ಇದೆ ಅಂತಾ ಜನ ತೀರ್ಮಾನ ಮಾಡಿದ್ದಾರೆ. ಆಡಳಿತಾತ್ಮಕವಾಗಿ ಸಣ್ಣಪುಟ್ಟ ವ್ಯತ್ಯಾಸ ಆಗಿತ್ತು. ಇದನ್ನು ಸರಿಪಡಿಸಿಕೊಳ್ಳುವ ದಿಕ್ಕಿನಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. ರಾಜ್ಯಾಧ್ಯಕ್ಷರು ಇದನ್ನು ಶೀಘ್ರವಾಗಿ ಬಗೆ ಹರಿಸುತ್ತೇವೆ ಎಂದಿದ್ದಾರೆ. ಈ ಸಮಸ್ಯೆ ಆದಷ್ಟು ಬೇಗ ಮುಗಿಯುತ್ತೆ ಎಂಬ ವಿಶ್ವಾಸ ನನಗೆ ಇದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ಸಚಿವ ಈಶ್ವರಪ್ಪ ವಿರುದ್ಧ ಸಿಎಂ ಆಪ್ತರು ಸಹಿ ಸಂಗ್ರಹ ನಡೆಸುತ್ತಿದ್ದಾರೆ ಎಂಬ ವಿಷಯವನ್ನು ಮಾಧ್ಯಮದಲ್ಲಿ ಗಮನಿಸಿದೆ. ಅದೆಲ್ಲಾ ಮುಗಿದು ಹೋದ ಕಥೆ. ಸಹಿ ಸಂಗ್ರಹ, ರಾಜೀನಾಮೆ, ಖಾತೆ ಬದಲಾವಣೆ ಈ ರೀತಿ ಎಲ್ಲಾ ಚರ್ಚೆ ನಡೆದಿದೆ. ಯಾರು ಯಾರು ಈ ರೀತಿ ಮಾಡಲು ಹೊರಟ್ಟಿದ್ದಾರೋ ಅವರಿಗೆ ನಾನು ಹೆದರಲ್ಲ, ಬಗ್ಗಲ್ಲ, ಜಗ್ಗಲ್ಲ ಅಂತಾ ಹೇಳಿದ್ದೀನಿ. ನಾನು ಈ ಹೇಳಿಕೆ ನೀಡಿದ ನಂತರ ಯಾರೂ ಈ ರೀತಿ ಮಾಡುವುದಿಲ್ಲ ಅಂದಿದ್ದಾರೆ. ಹೀಗಾಗಿ ಈ ವಿಷಯ ಇವತ್ತಿಗೆ ಮುಕ್ತಾಯ ಕಾಣಲಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.