ಚಿಕ್ಕಮಗಳೂರು: ಸಂಘ ಪರಿವಾರ ಯಾವುದಾದರೂ ಹತ್ಯೆಯಲ್ಲಿ ಭಾಗಿಯಾಗಿದ್ರೆ, ನೀವೇ ಐದು ವರ್ಷ ಅಧಿಕಾರದಲ್ಲಿ ಇದ್ದಿರಿ ಸಂಘವನ್ನು ನಿಷೇಧ ಮಾಡಲು ಶಿಫಾರಸು ಮಾಡಬಹುದಿತ್ತು. ಯಾಕೆ ಅವತ್ತು ಬ್ಯಾಟರಿ ಇರಲಿಲ್ವಾ ಎಂದು ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಟುವಾಗಿ ಟೀಕಿಸಿದ್ದಾರೆ.
ನಗರದ ತಮ್ಮ ಮನೆಯಲ್ಲಿ ಮಾತನಾಡಿರುವ ಸಚಿವ ಸಿ.ಟಿ.ರವಿ, ಸಂಘ ಪರಿವಾರದವರು ಕೊಲೆ ಆರೋಪಿಗಳು ಎಂದು ಸಿದ್ದರಾಮಯ್ಯ ಮಾಡಿರುವ ಟ್ವೀಟ್‍ಗೆ ತಿರುಗೇಟು ನೀಡಿದ್ದಾರೆ. ವಯಸ್ಸಾದ ಮೇಲೆ ಪ್ರಬುದ್ಧತೆ ಬರಬೇಕು. ಮನಸ್ಸು ಪಕ್ವ ಆಗಬೇಕು. ಪೂರ್ವಗ್ರಹ ಪೀಡಿತ ಮನೋಭಾವನೆಯಿಂದ ಹೊರಬರಬೇಕೆಂದು ಮಾತಿನಲ್ಲಿ ತಿವಿದಿದ್ದಾರೆ.
ಸಂಘವನ್ನು ನೀವು ಎಷ್ಟು ಹತ್ತಿರದಿಂದ ನೋಡಿದ್ದೀರಿ, ನಾನು ಸಂಘದ ಸ್ವಯಂ ಸೇವಕ. ಹಾಗಾಗಿಯೇ ಶಾಸಕ, ಸಚಿವನಾಗಿರೋದು. ನರೇಂದ್ರ ಮೋದಿಯವರು ಪ್ರಧಾನಿಯಾಗಿರೋದು. ಸಂಘ ಹೇಳಿಕೊಡುವುದು ದೇಶಭಕ್ತಿ ಹಾಗೂ ಸಂಸ್ಕಾರವನ್ನ. ಟೀಕೆ ಮಾಡುವವರನ್ನ ಹತ್ಯೆ ಮಾಡಬೇಕೆಂಬುದು ಸಂಘದ ಮನೋಭಾವವಾಗಿದ್ರೆ ಬಹಳ ಜನ ಭೂಮಿ ಮೇಲೆ ಇರುತ್ತಿರಲಿಲ್ಲ. ಟೀಕಿಸಿಯೂ ಉಳಿದಿದ್ದಾರೆ ಅಂದ್ರೆ ಸಂಘ ಹತ್ಯೆ ರಾಜಕಾರಣದ ಮೇಲೆ ನಂಬಿಕೆ ಇಟ್ಟಿಲ್ಲ ಎಂದಿದ್ದಾರೆ.
ಗಾಂಧೀಜಿ ಹತ್ಯೆ ಆರೋಪವನ್ನು ನಿಮ್ಮ ಕಾಂಗ್ರೆಸ್ ಮುಖಂಡರು ಸಂಘದ ಮೇಲೆ ಹಾಕಿದರು. ಆವತ್ತಿನ ಸರ್ಕಾರವೇ ನೇಮಕ ಮಾಡಿದ್ದ ಕಪೂರ್ ಕಮಿಷನ್ ಗಾಂಧಿ ಹತ್ಯೆಗೂ ಆರ್‍ಎಸ್‍ಎಸ್ ಗೂ ಸಂಬಂಧವಿಲ್ಲ ಎಂದಿತ್ತು. ಆರೋಪ ಮಾಡಿದವರೆ ಸಂಘದ ಮೇಲಿನ ಆರೋಪವನ್ನ ವಾಪಸ್ ತೆಗೆಯಬೇಕಾಯಿತು. ಕೋರ್ಟ್ ಮುಂದೆ ಸಾಬೀತು ಪಡಿಸಿಕೊಳ್ಳಲು ಆಗಿಲ್ಲ. ಈಗ ಮತ್ತೆ ಅಂತಹದ್ದೇ ಆರೋಪ ಮಾಡುತ್ತಿದ್ದೀರಾ. ನಿಮ್ಮ ರಾಜಕೀಯ ತೇವಲಿಗೆ ದೇಶಭಕ್ತ ಸಂಘಟನೆ ಮೇಲೆ ಸುಳ್ಳು ಆರೋಪ ಮಾಡುವ ಕೆಲಸ ಮಾಡಬೇಡಿ. ಸಂಘ ಜಾತಿವಾದಿಯೂ ಅಲ್ಲ. ದೇಶದ್ರೋಹಿಯೂ ಅಲ್ಲ. ಸಂಘವನ್ನ ಟೀಕಿಸುವ ಭರದಲ್ಲಿ ದೇಶ ಒಡೆಯುವ ಸಂಚು ರೂಪಿಸುವ ಮನೋಭಾವನೆ ಇರುವವರನ್ನು ಬೆಂಬಲಿಸುವ ಪಾಪದ ಕೆಲಸಕ್ಕೆ ಹೋಗಬೇಡಿ, ಅದಕ್ಕೆ ಬಲಿಯಾಗಬೇಡಿ ಎಂದು ಸಲಹೆ ನೀಡಿದ್ದಾರೆ.
ನಿಮ್ಮ ಟ್ವಿಟ್ಟರ್ ಖಾತೆ ನಿರ್ವಹಿಸುವವನಿಗೆ ಮಾಡುವವನಿಗೆ ಸ್ವಲ್ಪ ವಾಸ್ತಾವಿಕ ನೆಲೆಗಟ್ಟಿನ ಮೇಲೆ ಟ್ವಿಟ್ ಮಾಡಲು ಹೇಳಿ. ಇಲ್ಲವಾದರೆ ಕಡೆಗಾಲದಲ್ಲಿ ನಿಮಗೂ ಕೆಟ್ಟ ಹೆಸರು ತರುತ್ತಾರೆ, ಇಕ್ಕಟ್ಟಿಗೆ ಸಿಲುಕಿಸುತ್ತಾರೆ. ನಿಮ್ಮ ಮಾಧ್ಯಮ ನಿರ್ವಹಣೆ ಮಾಡಿಕೊಳ್ಳುವಂತಹ ಕೆಲವರು ಹುಟ್ಟುವಾಗಲೇ ಸಂಘದ ದ್ವೇಷಿಯಾಗಿ ಹುಟ್ಟಿದ್ದಾರೆ. ಹಾಗಾಗಿ ಯಾರ್ಯಾರು ಸಂಘವನ್ನು ವಿರೋಧಿಸುತ್ತಾರೋ ಅವರೆಲ್ಲರನ್ನೂ ಅಪ್ಪಿಕೊಳ್ಳುತ್ತಾರೆ. ಅವರೆಲ್ಲರ ಜೊತೆ ವೇದಿಕೆ ಹಂಚಿಕೊಳ್ಳುತ್ತಾರೆ. ಹಾಗೆ ಹಂಚಿಕೊಳ್ಳುವವರ ಕೈಗೆ ನಿಮ್ಮ ಟ್ವಿಟ್ಟರ್ ಕೊಟ್ಟು ನೀವು ಕೆಟ್ಟು ಹೋಗಬೇಡಿ ಎಂದಿದ್ದಾರೆ.
ಸಂಘವನ್ನು ಟೀಕೆ ಮಾಡುವುದಕ್ಕೂ ಮುನ್ನ ಸಂಘ ಮಾಡುತ್ತಿರುವ ಸಮಾಜಮುಖಿ ಕೆಲಸಗಳನ್ನು ಸ್ವಲ್ಪ ತಿಳಿದುಕೊಳ್ಳುವ ಕೆಲಸ ಮಾಡಿ. ಏಕಲವ್ಯ ವಿದ್ಯಾಲಯಗಳು ಅಂದ್ರೆ ಏನೆಂದು ನಿಮಗೆ ಗೊತಿದ್ಯಾ, ಸರಸ್ವತಿ ಶಿಶು ಮಂದಿರ ಅಂದರೆ ಏನು ಗೊತ್ತಾ, ಸರಸ್ವತಿ ಶಿಶುಮಂದಿರ ಹಾಗೂ ಏಕಲವ್ಯ ವಿದ್ಯಾಲಯಗಳಲ್ಲಿ ಕಲಿತೋರು ಯಾರೂ ಭಯೋತ್ಪಾದಕರಾಗಿಲ್ಲ. ಯಾರೂ ಕೊಲೆಗಡುಕರಾಗಿಲ್ಲ. ಅವರೆಲ್ಲ ದೇಶಭಕ್ತರಾಗಿದ್ದಾರೆ. ಯಾರೂ ಜಾತಿವಾದಿಗಳು ಆಗಿಲ್ಲ. ಅವರು ದೇಶ ಪ್ರೇಮಿಗಳಾಗಿದ್ದಾರೆ. ಅರೆಬರೆ ತಿಳುವಳಿಕೆ ಇದ್ದೋರು ಸಮಾಜ ಒಡೆಯುವ ಕೆಲಸ ಮಾಡ್ತಾರೆ, ಜಾತಿ ವಾದಿಗಳಾಗ್ತಾರೆ. ವೋಟಿಗಾಗಿ ಎಲ್ಲರನ್ನೂ ತಬ್ಬಿಕೊಳ್ತಾರೆ ಎಂದು ಸಿದ್ದು ಹಾಗೂ ಸಂಘದ ವಿರೋಧಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.