– ಜನರೇ ನೀವು ಹೊರಗೆ ಹೋಗುವ ಮುನ್ನ ಎಚ್ಚರ
– ಬೆಂಗಳೂರಿನ ಯಾವ ರಸ್ತೆ ಲಾಕ್ ಆಗುತ್ತೆ?
ಬೆಂಗಳೂರು: ಕೊರೊನಾ ಲಾಕ್‍ಡೌನ್ ಬಳಿಕ ಇದೇ ಮೊದಲ ಬಾರಿಗೆ ರಾಜ್ಯ ಶುಕ್ರವಾರ ಲಾಕ್ ಆಗುತ್ತಿದೆ. ವಿವಾದಾತ್ಮಕ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಾಳೆ ಬೀದಿಗೆ ಇಳಿಯಲಿದ್ದು, ಬೆಂಗಳೂರು ಸೇರಿ ಇಡೀ ರಾಜ್ಯಾದ್ಯಂತ ಹೆದ್ದಾರಿಗಳನ್ನು ಬಂದ್ ಮಾಡಲಿದ್ದಾರೆ. ಇದರಿಂದ ರಾಜ್ಯದಲ್ಲಿ ಜನಜೀವನ ಸ್ತಬ್ಧವಾಗುವ ಎಲ್ಲಾ ಸಾಧ್ಯತೆಗಳು ಇವೆ.
Advertisement
ಬೆಂಗಳೂರಿನ ದಶ ದಿಕ್ಕುಗಳಲ್ಲೂ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಲಿದ್ದು, ಪ್ರಮುಖ ಜಂಕ್ಷನ್‍ಗಳು ಲಾಕ್ ಆಗಲಿವೆ. ವ್ಯಾಪಾರ ವಹಿವಾಟಿನ ಮೇಲೆಯೂ ಪರಿಣಾಮ ಬೀರಲಿದೆ. ಹೆದ್ದಾರಿ ತಡೆ ಕಾರಣ ನಾಳೆ ಬೆಂಗಳೂರಿಗೆ ಎಂಟ್ರಿ ಮತ್ತು ಎಕ್ಸಿಟ್ ಎರಡೂ ಇರಲ್ಲ. ಜೊತೆಗೆ ನಾಳೆಯಿಂದ ನಾಲ್ಕು ದಿನ ಸಾಲು ಸಾಲು ರಜೆಗಳು ಇವೆ. ನಾಳೆ ಅಧಿಕೃತವಾಗಿ ರಜೆ ಘೋಷಣೆ ಮಾಡಿಲ್ಲ. ಆದ್ರೆ ‘ಅಘೋಷಿತ’ ಬಂದ್ ಇರಲಿದೆ. ನಾಡಿದ್ದು 4ನೇ ಶನಿವಾರದ ರಜೆ ಇದೆ. ಭಾನುವಾರ ಮಾಮೂಲಿ ರಜೆ ಇರಲಿದೆ. ಸೋಮವಾರ ಕರ್ನಾಟಕ ಬಂದ್ ಇದೆ.
Advertisement
Advertisement
ಸಾಲು ಸಾಲು ರಜೆ ಇದೆ ಎಂದು ಪ್ರವಾಸ ಹೊರಟಿದ್ರೆ, ನಿಮ್ಮ ಪ್ರಯಾಣ ರದ್ದು ಮಾಡುವುದೋ ಅಥ್ವಾ ಮುಂದಕ್ಕೆ ಹಾಕುವುದು ಒಳ್ಳೆಯದು. ಇಲ್ಲವಾದ್ರೆ ಮಾರ್ಗ ಮಧ್ಯೆ ಸಿಲುಕಿ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು.
Advertisement
ಬೆಂಗಳೂರಿನ ಯಾವ ರಸ್ತೆಗಳು ಲಾಕ್: ಮೈಸೂರು ಬ್ಯಾಂಕ್ ಸರ್ಕಲ್, ಏರ್‍ಪೋರ್ಟ್ ರಸ್ತೆ, ಗೊರಗುಂಟೆ ಪಾಳ್ಯ, ನೆಲಮಂಗಲ ಟೋಲ್, ಅತ್ತಿಬೆಲೆ ಟೋಲ್, ದೇವನಹಳ್ಳಿ ರಸ್ತೆ, ಮಲ್ಲೇಶ್ವರಂ- ಯಶವಂತಪುರ ರಸ್ತೆ, ಮಾರತ್‍ಹಳ್ಳಿ-ಎಂಜಿ ರಸ್ತೆ, ಎಲೆಕ್ಟ್ರಾನಿಕ್ ಸಿಟಿ ಟೋಲ್, ವಿಧಾನಸೌಧ ಅಸುಪಾಸು, ಚಿಕ್ಕಪೇಟೆ-ಕೆ.ಆರ್.ಮಾರ್ಕೆಟ್
ಹೆದ್ದಾರಿ ಲಾಕ್: ಬೆಂಗಳೂರು- ಮೈಸೂರು ಹೆದ್ದಾರಿ, ಬೆಂಗಳೂರು- ತುಮಕೂರು ಹೆದ್ದಾರಿ, ಬೆಂಗಳೂರು- ಹೊಸೂರು ಹೆದ್ದಾರಿ, ಬೆಂಗಳೂರು- ಹಾಸನ ಹೆದ್ದಾರಿ, ಓಲ್ಡ್ ಮದ್ರಾಸ್ ರೋಡ್, ಬೆಂಗಳೂರು-ಹೊಸಕೋಟೆ, ಬೆಂಗಳೂರು-ದೇವನಹಳ್ಳಿ ರೋಡ್, ಬೆಂಗಳೂರು- ಹೊಸೂರು ಹೈವೇ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿ ತರಲು ಉದ್ದೇಶಿಸಿರುವ ಕೃಷಿ ಮಸೂದೆ ವಿರೋಧಿಸಿ 2000ಕ್ಕೂ ಹೆಚ್ಚು ರೈತ ಸಂಘಟನೆಗಳು ದೇಶದ್ಯಾಂತ ನಾಳೆ ಹಾಗೂ ಸೆಪ್ಟೆಂಬರ್ 28ರಂದು ಪ್ರತಿರೋಧ್ ದಿವಸ್ ಹಮ್ಮಿಕೊಂಡಿದ್ದು, ರಾಜ್ಯದಲ್ಲಿಯೂ ಇದರ ಪರಿಣಾಮ ಇರಲಿದೆ. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರೈತ ಮುಖಂಡರು ನಾಳೆ ರಸ್ತೆ ರೋಕೋ ಮತ್ತು ಸೋಮವಾರ ಕರ್ನಾಟಕ ಬಂದ್ ನಡೆಸೋದಾಗಿ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಜೊತೆಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಾಪುರ ನಾಗೇಂದ್ರ ಮಾತನಾಡಿ, ದುಡಿಯುವ ವರ್ಗವನ್ನ ತುಳಿದು ಬದುಕುವ ಕೆಲಸ ನಡೆದಿದೆ ಎಂದು ಆಕ್ರೋಶ ಹೊರಹಾಕಿದರು. ಕೋಡಿಹಳ್ಳಿ ಚಂದ್ರಶೇಖರ್, ರೈತರ ಹೋರಾಟ ಪ್ರಶ್ನಿಸುತ್ತಿರುವ ಸಚಿವ ಬಿಸಿ ಪಾಟೀಲ್, ಸಿಟಿ ರವಿ ಹಾಗೂ ಸೋಮಶೇಖರ್ ಮೇಲೆ ಫುಲ್ ಗರಂ ಆದ್ರು. ನಿಮ್ಮ ಪ್ರಧಾನಿ ಹೇಳಿದ್ದನ್ನು ಸಮರ್ಥಿಸಿಕೊಳ್ಳಿ. ಆದರೆ ರೈತರಿಗೆ ಅನುಕೂಲ ಅಂತ ಹೇಳಬೇಡಿ. ಸಿಟಿ ರವಿ ಅವ್ರೇ ಪ್ರೊಫೆಸರ್ ನಂಜುಂಡ ಸ್ವಾಮಿ ಹೇಳಿದ್ದೇನು ಎಂಬುದೇ ನಿಮಗೆ ಅರ್ಥ ಆಗಿಲ್ಲ. ಎಲ್ಲರೂ ಸೇರಿಕೊಂಡು ರೈತರ ಕಥೆ ಮುಗಿಸಲು ಹೊರಟಿದ್ದೀರಿ ಎಂದು ಕಿಡಿಕಾರಿದ್ರು. ಆದರೆ ರಸ್ತೆ ತಡೆ ನಡೆಸೋದಕ್ಕೆ ತಮ್ಮ ಬೆಂಬಲ ಇಲ್ಲ. ಸೋಮವಾರ ಬಂದ್‍ಗೆ ನಮ್ಮ ಬೆಂಬಲ ಅಂತಾ ಹೇಳಿದರು.
ಈ ಮಧ್ಯೆ ಬಿಜೆಪಿಯವರು ರೈತರನ್ನ ಮಾರಾಟ ಮಾಡ್ತಿದ್ದಾರೆ. ಅಂತಾರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಹೀಗೆ ಮಾಡಲಾಗ್ತಿದೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದರು. ಕೃಷಿ ಸಚಿವ ಬಿಸಿ ಪಾಟೀಲ್ ಮಾತನಾಡಿ, ಎಪಿಎಂಸಿ ಕಾಯಿದೆಯಿಂದ ಯಾವ ರೈತರಿಗೂ ನಷ್ಟ ಇಲ್ಲ ಅಂತಾ ಪುನರುಚ್ಛಿರಿಸಿದ್ರು. ರೈತರಿಗೆ ಅನ್ಯಾಯ ಆಗ್ತಿದೆ ಅಂದ್ರೆ ಅದು ಯಾವ ರೀತಿ ಅಂತಾ ಕಾಂಗ್ರೆಸ್‍ನವರು ಹೇಳಲಿ. ಕಾಂಗ್ರೆಸ್‍ಗೆ ಹೆದರಿಕೊಂಡು ಕೂರೋಕೆ ಆಗುತ್ತಾ? ಅವ್ರು ಹೇಳಿದಂತೆ ಕೇಳಿಕೊಂಡು ಸರ್ಕಾರ ನಡೆಸೋಕೆ ಆಗಲ್ಲ ಅಂತಾ ಗರಂ ಆದರು.