ಸಿಗಂದೂರು ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತರಲ್ಲ- ಸಿಎಂ ಅಭಯ

Public TV
1 Min Read
b sigandur temple

ಬೆಂಗಳೂರು: ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದರು.

ಸಿಂಗದೂರು ಶ್ರೀ ಚೌಡೇಶ್ವರಿ ದೇವಾಲಯದ ಸಂಘರ್ಷದ ಕುರಿತು ಸಾಗರ ಶಾಸಕ ಹರತಾಳು ಹಾಲಪ್ಪ ನೇತೃತ್ವದಲ್ಲಿ ಈಡಿಗ ಸಮುದಾಯದ ನಿಯೋಗ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿತು. ಈ ವೇಳೆ ಮುಖ್ಯಮಂತ್ರಿಗಳು ಭರವಸೆ ನೀಡಿದ್ದು, ದೇವಸ್ಥಾನವನ್ನು ಯಾವುದೇ ಕಾರಣಕ್ಕೂ ಮುಜರಾಯಿ ಇಲಾಖೆ ವ್ಯಾಪ್ತಿಗೆ ತರುವುದಿಲ್ಲ ಎಂದು ಹೇಳಿದರು.

SMG Sigandur Chowdeshwari Temple 2

ದೇವಾಲಯದ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ಹಾಗೂ ಭಕ್ತರು ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಸಿಂಗದೂರು ಚೌಡೇಶ್ವರಿ ದೇವಾಲಯಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ರಚನೆ ಮಾಡಿರುವ ಸಲಹಾ ಸಮಿತಿ ಮಾರ್ಪಾಡಿಗೆ ಮನವಿ ಮಾಡಲಾಯಿತು. ಅಲ್ಲದೆ ಈ ಹಿಂದೆ ದೇವಾಲಯ ನಡೆಯುತ್ತಿದ್ದ ರೀತಿಯಲ್ಲೇ ಇನ್ನು ಮುಂದೆ ನಡೆಸಿಕೊಂಡು ಹೋಗಲು ಅನುವು ಮಾಡಿಕೊಡಿ ಎಂದು ನಿಯೋಗ ಸಿಎಂಗೆ ಮನವಿ ಮಾಡಿತು. ಇದಕ್ಕೆ ಉತ್ತರಿಸಿದ ಸಿಎಂ, ಸಿಗಂದೂರು ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ ಎಂದು ಭರವಸೆ ನೀಡಿದರು.

CM BSY 1 1

ಜಿಲ್ಲಾಡಳಿತ ನೇತೃತ್ವದ ಸಲಹಾ ಸಮಿತಿಗೆ ಈಡಿಗ ಸಮುದಾಯದ ಶ್ರೀ ರೇಣುಕಾನಂದ ಸ್ವಾಮೀಜಿ ಸೇರ್ಪಡೆ ಮಾಡಿಕೊಳ್ಳಲು ಸಿಎಂ ಸೂಚಿಸಿದ್ದಾರೆ. ಇವರ ಸಲಹೆ, ಮಾರ್ಗದರ್ಶನವನ್ನು ತೆಗೆದುಕೊಂಡು ಸಮಿತಿ ಕಾರ್ಯ ನಿರ್ವಹಿಸಲಿದೆ. ಈಗ ರಚನೆಯಾಗಿರುವ ಸಮಿತಿ ನಾಲ್ಕು ತಿಂಗಳವರೆಗೆ ಮುಂದುವರೆಯಲಿದೆ. ಬಳಿಕ ಸಮಿತಿ ಇರಬೇಕೋ ಅಥವಾ ಕೈ ಬಿಡಬೇಕೋ ಎಂಬ ಕುರಿತು ನಿರ್ಧರಿಸಲಾಗುತ್ತದೆ ಎಂದು ಸಭೆಯಲ್ಲಿ ಸಿಎಂ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *