– ಡೆಲ್ಲಿಗೆ 18 ರನ್ ಗಳ ಜಯ
– ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದ ಡೆಲ್ಲಿ
ಶಾರ್ಜಾ: ಸಿಕ್ಸರ್, ಬೌಂಡರಿಗಳ ಸುರಿಮಳೆಯಾಗಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ 18 ರನ್ ಗಳಿಂದ ಜಯಗಳಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಡೆಲ್ಲಿ ಮೊದಲ ಸ್ಥಾನಕ್ಕೆ ಏರಿದರೆ, ಬೆಂಗಳೂರು ಎರಡನೇ ಸ್ಥಾನಕ್ಕೆ ಜಾರಿದೆ.
ಗೆಲ್ಲಲು 229 ರನ್ ಗಳ ಕಠಿಣ ಗುರಿಯನ್ನು ಪಡೆದ ಕೋಲ್ಕತ್ತಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 210 ರನ್ ಗಳಿಸಿತು. ಈ ಪಂದ್ಯದಲ್ಲಿ ಕೋಲ್ಕತ್ತಾ ಪರ 14 ಸಿಕ್ಸ್, 12 ಬೌಂಡರಿ ಬಂದರೆ ಡೆಲ್ಲಿ ಪರ14 ಸಿಕ್ಸ್, 18 ಬೌಂಡರಿ ಸಿಡಿಯಲ್ಪಟ್ಟಿತ್ತು.
ತಂಡದ ಮೊತ್ತ 117 ರನ್ ಆಗಿದ್ದಾಗ ಬೌಲರ್ ಹರ್ಷಲ್ ಪಟೇಲ್ ನಿತೀಶ್ ರಾಣಾ ಮತ್ತು ದಿನೇಶ್ ಕಾರ್ತಿಕ್ ಅವರ ವಿಕೆಟ್ ಪಡೆದು ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ಕೊನೆಯಲ್ಲಿ ಮಾರ್ಗನ್ ಮತ್ತು ತ್ರಿಪಾಠಿ ಸಿಕ್ಸ್ ಬೌಂಡರಿಗಳನ್ನು ಸಿಡಿಸಿ ಗೆಲುವಿನ ಆಸೆ ಚಿಗುರಿಸಿದರು. ಆದರೆ ತಂಡದ ಮೊತ್ತ 200 ಆಗಿದ್ದಾಗ ಮಾರ್ಗನ್ 44 ರನ್ (18 ಎಸೆತ, 1 ಬೌಂಡರಿ, 5 ಸಿಕ್ಸ್) ಹೊಡೆದು ಕ್ಯಾಚ್ ನೀಡಿ ಔಟಾದರೆ 207 ರನ್ ಆಗಿದ್ದಾಗ 36ರನ್ (16 ಎಸೆತ, 3 ಬೌಂಡರಿ, 3 ಸಿಕ್ಸರ್) ಸಿಡಿಸಿದ್ದ ತ್ರಿಪಾಠಿ ಔಟದರು.
ಡೆಲ್ಲಿ ಕ್ಯಾಪಿಟಲ್ಸ್ ತಂಡದ 229 ರನ್‍ಗಳ ಭರ್ಜರಿ ಟಾರ್ಗೆಟ್ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ಎರಡನೇ ಓವರಿನಲ್ಲೇ ವಿಕೆಟ್ ಕಳೆದುಕೊಂಡು ಮುಗ್ಗರಿಸಿತು. ಪವರ್ ಪ್ಲೇ ಹಂತ ಮುಕ್ತಾಯವಾಗುವಷ್ಟರಲ್ಲಿ 59 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು.
ನಿತೀಶ್ ರಾಣಾ (35 ಬಾಲ್‍ಗೆ 58 ರನ್) ಅರ್ಧ ಶತಕ ಬಾರಿಸಿ ಭರವಸೆ ಮೂಡಿಸಿದರು. 58 ರನ್‍ಗಳ ಪೈಕಿ 4 ಸಿಕ್ಸ್ ಹಾಗೂ 4 ಬೌಂಡರಿ ಚೆಚ್ಚಿದ್ದರು. 12.4ನೇ ಓವರಿನಲ್ಲಿ ರಾಣಾ ವಿಕೆಟ್ ಒಪ್ಪಿಸುವ ಮೂಲಕ ತಂಡವನ್ನು ಸೋಲಿನ ಸುಳಿಗೆ ದೂಡಿದರು. ರಾಣಾ ಔಟಾಗುತ್ತಿದ್ದಂತೆ ಮುಂದಿನ ಬಾಲ್‍ಗೆ ದಿನೇಶ್ ಕಾರ್ತಿಕ್ ಸಹ ವಿಕೆಟ್ ಒಪ್ಪಿಸಿದರು.
ಭರ್ಜರಿ 229 ಟಾರ್ಗೆಟ್ ನೀಡಿದ್ದರೂ, ಬೌಲಿಂಗ್‍ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಎಡವಿತು. ಎನ್ರಿಚ್ ನಾಟ್ರ್ಜ್ ಮೂರು ವಿಕೆಟ್ ಕಬಳಿಸುವ ಮೂಲಕ ಮಿಂಚಿದರೆ, ಹರ್ಷಲ್ ಪಟೇಲ್ 2, ಅಮಿತ್ ಮಿಶ್ರಾ, ಕಗಿಸೊ ರಬಾಡ, ಮಾರ್ಕಸ್ ಸ್ಟೊಯ್ನಿಸ್ ತಲಾ ಒಂದು ವಿಕೆಟ್ ಕಬಳಿಸಿದರು.
ಮಾರ್ಗನ್ ಅಬ್ಬರದ ಆಟ:
ತಂಡ ಸಂಕಷ್ಟದಲ್ಲಿದ್ದಾಗ 13.5ನೇ ಓವರಿಗೆ ಆಗಮಿಸಿದ ಇಯಾನ್ ಮಾರ್ಗನ್ ತಂಡವನ್ನು ಗೆಲ್ಲಿಸಲು ಇನ್ನಿಲ್ಲದ ಪ್ರಯತ್ನ ಮಾಡಿದರು. ಸ್ಟ್ರೈಕ್‍ಗೆ ಬರುತ್ತಿದ್ದಂತೆ ಮೊದಲ ಬಾಲ್ ಸಿಕ್ಸ್ ಚೆಚ್ಚಿದರು. ಆದರೆ ಕೊನೆಯ ಹಂತದಲ್ಲಿ 18.3ನೇ ಓವರಿನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಮಾರ್ಗನ್ ಕೇವಲ 18 ಬಾಲ್‍ಗೆ 44 ರನ್ ಸಿಡಿಸಿದ್ದರು. 5 ಸಿಕ್ಸ್ 1 ಬೌಂಡರಿ ಚಚ್ಚುವ ಮೂಲಕ ಗೆಲುವಿನ ಆಸೆ ಮೂಡಿಸಿದರು.
ರಾಣಾ ಪವರ್ಫುಲ್ ಬ್ಯಾಟಿಂಗ್:
ಶುಭಮನ್ ಗಿಲ್ ಔಟಾಗುತ್ತಿದ್ದಂತೆ 8.2 ಓವರಿಗೆ ಆಗಮಿಸಿದ ರಾಣಾ 35 ಬಾಲ್‍ಗೆ 58 ರನ್ ಗಳಿಸಿದರು. ಉತ್ತಮವಾಗಿ ಆಡುತ್ತಿದ್ದ ರಾಣಾ ತಂಡ 117 ರನ್ ಗಳಿಸಿದ ಸಂದರ್ಭದಲ್ಲಿ 12 ಓವರಿನ 4ನೇ ಎಸೆತದಲ್ಲಿ ಭಾರೀ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿದರು.
ಮಾರ್ಗನ್, ತ್ರಿಪಾಠಿ ಜೊತೆಯಾಟ:
ಮಾರ್ಗನ್ ಹಾಗೂ ತ್ರಿಪಾಠಿ ಇಬ್ಬರೂ ಭರ್ಜರಿ ಜೊತೆಯಾಟ ಆರಂಭಿಸಿದ್ದರು. ಕೇವಲ 31 ಬಾಲ್‍ಗೆ 78 ರನ್ ಸಿಡಿಸುವ ಮೂಲಕ ತಂಡದ ದಿಕ್ಕನ್ನೇ ಬದಲಿಸಿದ್ದರು. 13ನೇ ಓವರಿಗೆ ಕಮ್ಮಿನ್ಸ್ ಔಟಾದ ಬಳಿಕ ಆಗಮಿಸಿದ್ದ ತ್ರಿಪಾಠಿ, ಮಾರ್ಗನ್ ಅವರೊಂದಿಗೆ ಉತ್ತಮ ಜೊತೆಯಾಟವಾಡಿದ್ದರು. ಇಬ್ಬರ ಜೊತೆಯಾಟದಲ್ಲಿ ಬರೋಬ್ಬರಿ 8 ಸಿಕ್ಸ್ 4 ಬೌಂಡರಿ ಚೆಚ್ಚಿದ್ದರು.
ನಿತೀಶ್ ರಾಣಾ, ಶುಭಮನ್ ಗಿಲ್ ಜೊತೆಯಾಟ:
ರಾಣಾ ಹಾಗೂ ಗಿಲ್ ತಮ್ಮ ಜೊತೆಯಾಟದಲ್ಲಿ 41 ಬಾಲ್‍ಗೆ 64 ರನ್ ಗಳಿಸಿದರು. ಇದರಲ್ಲಿ 5 ಸಿಕ್ಸ್ 6 ಬೌಂಡರಿ ಚಚ್ಚಿದ್ದರು. 8ನೆ ಓವರ್ ಆರಂಭವಾಗುತ್ತಿದ್ದಂತೆ ಗಿಲ್ ವಿಕೆಟ್ ಒಪ್ಪಿಸಿದರು.
ಶುಭಮನ್ ಗಿಲ್ 22 ಬಾಲ್‍ಗೆ 28 ರನ್ ಗಳಿಸಿ ಔಟಾಗುತ್ತಿದ್ದಂತೆ 9.5ನೇ ಓವರ್ನಲ್ಲಿ ಆಂಡ್ರೆ ರಸೆಲ್ ಸಹ 8 ಬಾಲ್‍ಗೆ 13 ಹೊಡೆದು ವಿಕೆಟ್ ಒಪ್ಪಿಸಿದರು. ಹೀಗೆ ಡೆಲ್ಲಿ ತಂಡ ವೇಗವಾಗಿ ವಿಕೆಟ್ ಕಳೆದುಕೊಂಡಿತು. 13.3ನೇ ಓವರಿಗೆ ಪ್ಯಾಟ್ ಕಮ್ಮಿನ್ಸ್ ಸಹ 4 ಬಾಲ್‍ಗೆ 5 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.