ಸಿಎಂ ಯಡಿಯೂರಪ್ಪಗೆ ಅಷ್ಟ ಸವಾಲು – ಆತುರದ ನಿರ್ಣಯ ಬೇಡ ಎಂದ ಹೈಕಮಾಂಡ್

Public TV
3 Min Read
CM BSY Reservation

ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರ, ಸಂಪುಟ ಬಿಕ್ಕಟ್ಟು, ಪಕ್ಷದೊಳಗಿನ ವಿರೋಧಿಗಳ ರಣತಂತ್ರಗಳಿಗೆ ಹೈರಾಣಾಗಿರುವ ಸಿಎಂ ಯಡಿಯೂರಪ್ಪಗೆ ಈಗ ಹೊಸದಾಗಿ ಒಂದಲ್ಲ.. ಎರಡಲ್ಲ.. ಬರೋಬ್ಬರಿ ಅಷ್ಟ ಸಂಕಷ್ಟಗಳು ಎದುರಾಗಿದೆ. ಪಂಚಮಸಾಲಿ, ಕುರುಬ ಸಮುದಾಯಗಳ ಹೋರಾಟ ನಡೆಯುತ್ತಿರೋ ಬೆನ್ನಲ್ಲೇ, ವಾಲ್ಮೀಕಿ ಸಮುದಾಯ ಕೂಡ ಸಿಡಿದೆದ್ದಿದೆ. ಇವತ್ತು ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿಗಳಿಗೆ ಗಡುವು ಕೂಡ ನೀಡಲಾಗಿದೆ.

Kuruba 2

ಇದೇ ಹೊತ್ತಲ್ಲಿ ಪ್ರಬಲ ಸಮುದಾಯಗಳಿಗೆ ಹೆಚ್ಚಿನ ಮೀಸಲಾತಿ ಸೌಲಭ್ಯ ಕಲ್ಪಿಸುವುದಕ್ಕೆ ಕೆಲ ಸಮುದಾಯಗಳು ಪ್ರಬಲ ವಿರೋಧ ಮಾಡುತ್ತಿವೆ. ಒಬ್ಬರ ಮೀಸಲಾತಿ ಬೇಡಿಕೆ ಈಡೇರಿಸಿದ್ರೇ ಇನ್ನೊಬ್ಬರು ಸಿಡಿದೇಳ್ತಾರೆ. ಇದರಿಂದ ಯಾರಿಗೆ ಕೊಡೋದು? ಯಾರಿಗೆ ಬಿಡೋದು ಅಂತಾ ಸಿಎಂ ಯಡಿಯೂರಪ್ಪ ತಲೆ ಕೆಡಿಸಿಕೊಂಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಮತ್ತು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ರೂ ಅಚ್ಚರಿಯಿಲ್ಲ ಎಂಬ ಮಾತು ಕೇಳಿಬರುತ್ತಿವೆ.

Valmiki 1

ಹೀಗಾಗಿ ಮೀಸಲಾತಿ ಹೋರಾಟಗಳು ಕೈಮೀರೋದನ್ನು ತಡೆಯೋದಕ್ಕೆ ಸಿಎಂ ಕಾರ್ಯತಂತ್ರ ರೂಪಿಸಿದ್ದಾರೆ. ಹೀಗಾಗಿ ಇನ್ನೂ ಎರಡು ವರ್ಷಗಳ ಕಾಲ ಮೀಸಲಾತಿ ಮುಲಾಮು ಹಚ್ಚುತ್ತಾ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಪ್ಲಾನ್ ಕೂಡ ನಡೆದಿದೆ. ಇದರ ಹೊಣೆಯನ್ನು ಆಯಾ ಸಮುದಾಯಗಳ ಸಚಿವರಿಗೆ ಸಿಎಂ ವಹಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

Valmiki 2

1. ವಾಲ್ಮೀಕಿ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್- ಶೇ.7.5
ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಏರಿಸಬೇಕು. ಮೀಸಲಾತಿ ಕುರಿತು ನ್ಯಾ.ನಾಗಮೋಹನದಾಸ್ ಸಮಿತಿ ವರದಿ ಹಲವು ತಿಂಗಳಾದರೂ ಬೇಡಿಕೆ ಈಡೇರಿಸಬೇಕು. ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ಸಿಎಂ ಮೇಲೆ ಒತ್ತಡ ಹಾಕಲಾಗುತ್ತಿದೆ. ಇಂದು ವಾಲ್ಮೀಕಿ ಶ್ರೀಗಳು ಮುಖ್ಯಮಂತ್ರಿಗಳಿಗೆ ಮಾರ್ಚ್ 9ರವರೆಗೆ ಗಡುವು ನೀಡಿದ್ದಾರೆ.

Panchama Sali 2

2. ಪಂಚಮಸಾಲಿ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್- 2ಎ
2ಎ ಮೀಸಲಾತಿಗೆ ಒತ್ತಾಯಿಸಿ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಂಚಮಸಾಲಿಗರು ಪಾದಯಾತ್ರೆ. ಕೂಡಲಸಂಗಮದಿಂದ ಬೆಂಗಳೂರಿಗೆ ಪಾದಯಾತ್ರೆ ಇದಾಗಿದ್ದು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಗೆ ಒತ್ತಾಯಿಸುತ್ತಿದ್ದಾರೆ. ಈ ನಡುವೆ ರಾಜಕೀಯ ಮೀಸಲಾತಿ ಬೇಡ ಎಂದು ಶ್ರೀಗಳು ಹೇಳಿದ್ದಾರೆ.

Kuruba 3

3. ಕುರುಬ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಎಸ್‍ಟಿಗೆ ಸೇರ್ಪಡೆ
ಎಸ್‍ಟಿ ಸಮುದಾಯಕ್ಕೆ ಸೇರಿಸಲು ಕುರುಬ ಸಮುದಾಯದವರು ನಿರಂತರವಾಗಿ ಒತ್ತಡ ಹಾಕುತ್ತಿದ್ದಾರೆ. ಬೆಂಗಳೂರಿಗೆ ಪಾದಯಾತ್ರೆ ಕೈಗೊಂಡಿದ್ದ ನಿರಂಜನಾಪುರಿ ಸ್ವಾಮೀಜಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ ನಡೆಸಿ ಸರ್ಕಾರಕ್ಕೆ ಸಂದೇಶ ರವಾನೆ ಮಾಡಿದ್ದಾರೆ. ಬೇಡಿಕೆ ಪರಿಶೀಲಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಿಎಂ ಮೇಲೆ ಒತ್ತಡ ಹಾಕಿದ್ದಾರೆ.

Kuruba 1

4. ಈಡಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: 2ಎ ಪಟ್ಟಿ ಬದಲಿಸಬೇಡಿ
ಪಂಚಮಸಾಲಿ ಮತ್ತು ಬಲಿಷ್ಠ ಜಾತಿಗಳನ್ನು 2ಎ ಪಟ್ಟಿಗೆ ಸೇರಿಸಬಾರದು. 2ಎ ಪಟ್ಟಿಯಲ್ಲಿರುವ 102 ಹಿಂದುಳಿದ ಜಾತಿಗಳಿಗೆ ಅನ್ಯಾಯ ಮಾಡಬಾರದು. 2ಎ ಮೀಸಲಾತಿ ಸ್ವರೂಪದಲ್ಲಿ ಯಾವುದೇ ಬದಲಾವಣೆ ಮಾಡಬಾರದು ಎಂದು ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಆಗ್ರಹಿಸಿದೆ. ಈಡಿಗ ಮತ್ತು ಈಡಿಗದ 26 ಉಪಜಾತಿಗಳು 2ಎ ಪಟ್ಟಿಯಲ್ಲಿದೆ.

Panchama Sali 1

5. ಗಾಣಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಎಸ್‍ಟಿಗೆ ಸೇರ್ಪಡೆ
ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಗಾಣಿಗ ಸಮಾಜ ಪಟ್ಟು ಹಿಡಿದಿದ್ದು, ಸದ್ಯದಲ್ಲೇ ಗಾಣಿಗ ಸಮುದಾಯದಿಂದ ಶಕ್ತಿ ಪ್ರದರ್ಶನ ಮಾಡ್ತೀವಿ ಎಂದು ವಿಜಯಪುರ ಜಿಲ್ಲೆ ಕೊಲ್ಹಾರದ ದಿಗಂಬರೇಶ್ವರ ಮಠದ ಕಲ್ಲಿನಾಥ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಮೀಸಲಾತಿ ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

6. ಮಾದಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಒಳ ಮೀಸಲಾತಿ
ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ನೀಡುವಂತೆ ಆಗ್ರಹ ವ್ಯಕ್ತವಾಗಿದ್ದು, ನ್ಯಾ.ಎ.ಜಿ ಸದಾಶಿವ ಆಯೋಗದ ವರದಿ ಶಿಫಾರಸು ಜಾರಿಗೆ ಪಟ್ಟು ಹಿಡಿದಿದ್ದಾರೆ. ಮಾ.25ರಿಂದ ಏ.14ರವರೆಗೂ ಪಾದಯಾತ್ರೆ ಮಾಡುವ ಎಚ್ಚರಿಕೆಯನ್ನ ಮಾದಿಗ ಸಮುದಾಯ ನೀಡಿದೆ. ದಲಿತ ಹೋರಾಟಗಾರ ಹರಿಹರದ ಬಿ.ಕೃಷ್ಣಪ್ಪ ಸಮಾಧಿಯಿಂದ ಪಾದಯಾತ್ರೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

7. ಗಂಗಾಮತಸ್ಥ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: ಎಸ್‍ಟಿ ಮೀಸಲಾತಿ
ಗಂಗಾಮತಸ್ಥ ಹಾಗೂ 38 ಉಪಜಾತಿಗಳನ್ನು ಎಸ್‍ಟಿಗೆ ಸೇರಿಸಲು ಸಿಎಂ ಮೇಲೆ ಒತ್ತಡ ಹಾಕಲಾಗುತ್ತಿದೆ. 2014ರ ಮಾರ್ಚ್ ನಲ್ಲೇ ಕೇಂದ್ರ ಸರ್ಕಾರಕ್ಕೆ ಶಿಫಾರಸು 2 ಬಾರಿ ಪ್ರಸ್ತಾವ ಮಾಡಲಾಗಿತ್ತು. ಆದ್ರೆ ಜನಗಣತಿ ಮಹಾನಿರ್ದೇಶಕರು ಪ್ರಸ್ತಾವವನ್ನ ತಿರಸ್ಕರಿಸಿದ್ದರು. 2018ರ ಅಕ್ಟೋಬರ್ ಮತ್ತು 2019ರ ಜುಲೈನಲ್ಲಿ ಹೆಚ್ಚುವರಿ ದಾಖಲೆ ಸಲ್ಲಿಕೆಗೆ ಸೂಚಿಸಲಾಗಿತ್ತು. ಫೆ.2ರಂದು ಕೇಂದ್ರಕ್ಕೆ ಮತ್ತೆ ಹೆಚ್ಚುವರಿ ಮಾಹಿತಿ, ದಾಖಲೆ ಸಲ್ಲಿಕೆ ಮಾಡಲಾಗಿದೆ.

8. ಒಕ್ಕಲಿಗ ಸಮುದಾಯದ ಫೈಟ್ – ಮೀಸಲಾತಿ ಡಿಮ್ಯಾಂಡ್: 2ಎ
ಪ್ರಬಲ ಒಕ್ಕಲಿಗ ಸಮುದಾಯದಿಂದಲೂ ಮೀಸಲಾತಿ ಕೂಗು ಕೇಳಿ ಬಂದಿದೆ. ಪಂಚಮಸಾಲಿ ಬೆನ್ನಲ್ಲೇ 2ಎ ಮೀಸಲಾತಿ ಕಲ್ಪಿಸಲು ಒತ್ತಾಯ ಹಾಕಲಾಗಿದ್ದು, ಈ ಕುರಿತು ಜೆಡಿಎಸ್ ವಕ್ತಾರ ಸಿಎಂಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ.

Share This Article
Leave a Comment

Leave a Reply

Your email address will not be published. Required fields are marked *