ಕೊಪ್ಪಳ: ಸಿಎಂ ಯಡಿಯೂರಪ್ಪ ಬದಲಾವಣೆ ಬಗ್ಗೆ ಮಾತನಾಡಬಾರದು. ಈ ಸಂಬಂಧ ಪಕ್ಷದ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.
ಹಿರಿಯರಾಗಲಿ ಅಥವಾ ಯಾರೇ ಆಗಲಿ ಈ ಸಂದರ್ಭದಲ್ಲಿ ಸಿಎಂ ಬದಲಾವಣೆಯ ಬಗ್ಗೆ ಮಾತನಾಡಬಾರದು. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈಗ ಎಲ್ಲರೂ ಒಗ್ಗಟ್ಟಿನಿಂದ ಸಂಕಷ್ಟ ಬಗೆಹರಿಸಬೇಕಾಗಿದೆ ಎಂದರು.
ಬಿ.ಎಸ್.ಯಡಿಯೂರಪ್ಪ ಬಗ್ಗೆ ಹೈಕಮಾಂಡಿಗೆ ಮಾಹಿತಿ ಇದೆ. ಯಾರಿಗಾದರೂ ಏನಾದ್ರೂ ಅಸಮಾಧಾನವಿದ್ದರೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಬೇಕು. ವಿರೋಧ ಪಕ್ಷದವರು ಈಗ ಸಿಎಂ ಬಗ್ಗೆ ಮಾತನಾಡುತ್ತಾರೆ. ಅವರಿಗೆ ಏನು ನೈತಿಕತೆ ಇದೆ ಎಂದು ಪ್ರಶ್ನಿಸಿದರು.
ಉಪಚುನಾವಣೆಯಲ್ಲಿ 14 ಸ್ಥಾನ ಬಿಜೆಪಿ ಗೆದ್ದಿದೆ. ಲೋಕಸಭೆ ಚುನಾಣೆಯಲ್ಲಿ ಕೇವಲ 25 ಜನ ಎಂಪಿಗಳು ಆಯ್ಕೆಯಾಗಿದ್ದಾರೆ. ಇನ್ನೂ ಎರಡು ವರ್ಷ ಸುಮ್ಮನೆ ಇರಬೇಕು. ಎರಡು ವರ್ಷದ ಬಳಿಕ ಚುನಾವಣೆ ಮೂಲಕ ಜನರ ಬಳಿ ಹೋಗೋಣ. ಅವರು ನೀಡುವ ತೀರ್ಮಾನಕ್ಕೆ ಬದ್ಧರಾಗಿರೋಣ. ಈಗ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಸಿಎಂ ಬಗ್ಗೆ ಮಾತನಾಡುವುದನ್ನು ವಿಪಕ್ಷ ನಾಯಕರು ನಿಲ್ಲಿಸಲಿ ಎಂದು ಆಗ್ರಹಿಸಿದರು.