ವಿಜಯಪುರ: ಅರುಣ್ ಸಿಂಗ್ ರಾಜ್ಯಕ್ಕೆ ಬಂದು ಹೋದ ನಂತರ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮೌನಕ್ಕೆ ಶರಣಾಗಿದ್ದಾರೆ. ಇತ್ತೀಚೆಗೆ ಮಾಧ್ಯಮಗಳಿಂದ ಕೂಡ ದೂರ ಉಳಿದಿರೋ ಯತ್ನಾಳ್ ಮೊನ್ನೆ ಮಾಧ್ಯಮಗಳಿಗೆ ವಿಕ್ಟರಿ ಸಿಂಬಲ್ ತೋರಿಸಿ ಪ್ರತಿಕ್ರಿಯೆ ಕೊಡದೆ ತೆರಳಿದ್ದರು.
ಇದೀಗ ಮತ್ತೆ ಯತ್ನಾಳ್ ಸಿಎಂ ವಿರುದ್ಧ ಪರೋಕ್ಷ ಸಮರ ಶುರು ಮಾಡಿದ್ದಾರೆ. 500 ಎಕರೆ ಜಮೀನು ಮಂಜೂರಿ ಮಾಡುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ವಿಜಯಪುರದ ಸಿದ್ದೇಶ್ವರ ಸಂಸ್ಥೆಯಿಂದ ಗೋಶಾಲೆ ತೆರೆಯಲು ಜಮೀನು ಅವಶ್ಯಕತೆ ಇದೆ. ಜಿಂದಾಲ್‍ಗೆ ಜಮೀನು ಮಂಜೂರು ಮಾಡಿಕೊಟ್ಟ ಹಾಗೆ ನಮಗೂ ಜಮೀನು ಮಂಜೂರು ಮಾಡಿಕೊಡಿ ಎಂದು ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಮೂವರನ್ನ ತೆಗೆದ್ರೆ ಬಿಎಸ್‍ವೈ ರಾಜೀನಾಮೆ ಕೊಡಬೇಕಾಗುತ್ತೆ: ಯತ್ನಾಳ್
ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷರಾಗಿರುವ ಯತ್ನಾಳ್, ಜಿಂದಾಲ್ ಕಂಪನಿಗೆ ಒಂದೂವರೆ ಲಕ್ಷಕ್ಕೆ 1 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಹಾಗೆ ನಾವು ಪ್ರತಿ ಎಕರೆಗೆ 2 ಲಕ್ಷ ರೂಪಾಯಿ ಹಣ ಪಾವತಿಸುತ್ತೇವೆ. ಜಿಂದಾಲ್ ಗೆ ಅನ್ವಯಿಸಿರೋ ಷರತ್ತುಗಳಂತೆ ನಮಗೂ ಭೂಮಿ ಮಂಜೂರು ಮಾಡಿ. ನಾವು ಗೋರಕ್ಷಣೆಗಾಗಿ ಭೂಮಿ ಕೇಳುತ್ತಿದ್ದೇವೆ. ನಮಗೂ ಜಿಂದಾಲ್‍ಗೆ ನೀಡಿರುವ ರೀತಿಯಲ್ಲೇ ಭೂಮಿಯನ್ನು ನೀಡಿ ಎಂದು ಪರೋಕ್ಷವಾಗಿ ಸಿಎಂ ವಿರುದ್ಧ ತೊಡೆತಟ್ಟಿದ್ದಾರೆ.