– ಸಿಇಟಿ ಪರೀಕ್ಷೆಯನ್ನು ರದ್ದುಗೊಳಿಸಿ
– ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರಕಟಿಸಿದ ಸಿಇಟಿ ಪರೀಕ್ಷೆಯನ್ನು ರದ್ದುಗೊಳಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಸಲ್ಲಿಕೆಯಾಗಿದ್ದು ನಾಳೆ ಈ ಪ್ರಕರಣ ಇತ್ಯರ್ಥವಾಗುವ ಸಾಧ್ಯತೆಯಿದೆ.
ವಕೀಲರಾದ ಎಸ್.ಪಿ. ಪ್ರದೀಪ್ ಕುಮಾರ್, ಅಬ್ದುಲ್ಲಾ ಖಾನ್, ಎನ್‌ಎಸ್‌ಯುಐ ವಿದ್ಯಾರ್ಥಿಗಳು ಪಿಐಎಲ್ ಸಲ್ಲಿಸಿದ್ದು ಇಂದು ಅರ್ಜಿಯ ವಿಚಾರಣೆ ಮುಖ್ಯ ನ್ಯಾ. ಅಭಯ್ ಓಕಾ ಮತ್ತು ನ್ಯಾ. ಸಂದೇಶ್ ಅವರಿಂದ ಪೀಠದಲ್ಲಿ ನಡೆಯಿತು.
Advertisement
Advertisement
ಕೋವಿಡ್ ಸಮಯದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ವಕೀಲ ಅಬ್ದುಲ್ಲಾ ಖಾನ್ ಪೀಠದ ಗಮನಕ್ಕೆ ತಂದರು. ಈ ವೇಳೆ ರಾಜ್ಯದಲ್ಲಿ 6 ಸಾವಿರ ಕಂಟೈನ್ಮೆಂಟ್ ವಲಯಗಳಿವೆ. ಈ ವಲಯದಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆಯನ್ನು ಹೇಗೆ ಬರೆಯಬೇಕು ಈ ಬಗ್ಗೆ ಮಾಹಿತಿ ನೀಡಿ ಎಂದು ಸರ್ಕಾರವನ್ನು ಪ್ರಶ್ನಿಸಿದರು.
Advertisement
ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ಈ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿ ಮಾಡಲಾಗಿದೆ ಎಂದು ತಿಳಿಸಿದರು.
Advertisement
ಅರ್ಜಿದಾರರು ಕೊನೆ ಕ್ಷಣದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕೋವಿಡ್ 19 ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ನಡೆಸಬೇಕೇ? ಬೇಡವೇ ಎಂಬುದರ ಬಗ್ಗೆ ಕೂಡಲೇ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಬೇಕು. ಕೋವಿಡ್‌ನಿಂದಾಗಿ ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಿ ಹಾಕುವ ಸಾಧ್ಯತೆಯಿದೆ. ಹೀಗಾಗಿ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಬುಧವಾರ ಮಧ್ಯಾಹ್ನ 2:30ರ ಒಳಗಡೆ ತನ್ನ ನಿರ್ಧಾರವನ್ನು ತಿಳಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಸೂಚಿಸಿ ನಾಳೆಗೆ ವಿಚಾರಣೆಯನ್ನು ಮುಂದೂಡಿತು.
ಅರ್ಜಿಯಲ್ಲಿ ಏನಿದೆ?
ರಾಜ್ಯದಲ್ಲಿ 2020ನೇ ಸಾಲಿನ ಸಿಇಟಿ ಪರೀಕ್ಷೆ ಜುಲೈ 30, 31 ಹಾಗೂ ಆಗಸ್ಟ್ 1ಕ್ಕೆ ನಿಗದಿ ಪಡಿಸಿ ಮೇ 13ರಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆ ಹೊರಡಿಸಿದೆ. ಜುಲೈ 18ರಂದು ಪ್ರಾಧಿಕಾರ ಪರೀಕ್ಷಾ ಕೇಂದ್ರಗಳು ಯಾವ ರೀತಿ ತಯಾರಿ ನಡೆಸಬೇಕು ಎಂಬುದರ ಸಂಬಂಧವಾಗಿ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಕೊರೊನಾ ವ್ಯಾಪಕವಾಗಿ ಹಬ್ಬುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸರಿಯಲ್ಲ. ಹೀಗಾಗಿ ಸಿಇಟಿ ಪರೀಕ್ಷೆಯನ್ನು ರದ್ದುಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಪಿಯು ಅಂಕಗಳ ಆಧಾರದಲ್ಲಿ ವೃತ್ತಿ ಶಿಕ್ಷಣ ಕೋರ್ಸ್‍ಗಳಿಗೆ ಪ್ರವೇಶ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಕೊರೊನಾ ಹರಡುವುದನ್ನು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ 2020ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಮುಂದೂಡಿ ನಂತರ ಪರೀಕ್ಞಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಜುಲೈ 30 ರಂದು ಜೀವಶಾಸ್ತ್ರ, ಗಣಿತ ಜುಲೈ 31 ರಂದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಪರೀಕ್ಷೆ ನಡೆದರೆ ಆಗಸ್ಟ್ ಒಂದರಂದು ಬೆಂಗಳೂರು ಕೇಂದ್ರದಲ್ಲಿ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಪ್ರತಿ ದಿನ ಬೆಳಗ್ಗೆ ಮತ್ತು ಮಧ್ಯಾಹ್ನ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕನ್ನಡ ಭಾಷಾ ಪರೀಕ್ಷೆಯನ್ನು 50 ಅಂಕಗಳಿಗೆ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ನಡೆಸಲಾಗುತ್ತದೆ. ಇತರೆ ವಿಷಯಗಳ ಪರೀಕ್ಷೆಗಳನ್ನು 60 ಅಂಕಗಳಿಗೆ ನಡೆಸಲಾಗುತ್ತದೆ.
ಮೊದಲನೇ ವರ್ಷದ / ಮೊದಲನೇ ಸೆಮಿಸ್ಟರ್ ನ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ ಮತ್ತು ನ್ಯಾಚುರೋಪತಿ, ಕೃಷಿ ವಿಜ್ಞಾನದ ಕೋರ್ಸ್‌ಗಳು ಮತ್ತು ಬಿ-ಫಾರ್ಮಾ-ಡಿ ಕೋರ್ಸ್‌ಗಳ ಪ್ರವೇಶಕ್ಕಾಗಿ ಸಿಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.