ಮೈಸೂರು: ಸಾಹಸ ಸಿಂಹ ವಿಷ್ಣುವರ್ಧನ್ ಅವರ 11ನೇ ಪುಣ್ಯ ಸ್ಮರಣೆಯ ದಿನವಾದ ಇಂದು ವಿಷ್ಣು ಪ್ರತಿಮೆ ಧ್ವಂಸಗೊಳಿಸಿದವರ ವಿರುದ್ಧ ಅವರ ದಾದಾ ಪುತ್ರಿ ಕೀರ್ತಿ ಮಾತಿನ ಚಾಟಿ ಬೀಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತಾನಾಡಿದ ಕೀರ್ತಿ, ಸಿಂಹ ಯಾವತ್ತಿದ್ದರೂ ಸಿಂಹವೇ. ತಂದೆ ಸಿಂಹದಂತೆ ಇದ್ದರು, ಯಾವಾಗಲೂ ಸಿಂಹದಂತೆ ಇರ್ತಾರೆ. ನಾಯಿಗಳು ಬೊಗಳಿದ ತಕ್ಷಣ ದೇವಲೋಕ ಹಾಳಾಗುವುದಿಲ್ಲ ಎಂದು ತಂದೆಯ ಪುತ್ಥಳಿ ಧ್ವಂಸಗೊಳಿಸಿದವರಿಗೆ ಖಡಕ್ ತಿರುಗೇಟು ಕೊಟ್ಟರು.
ತಂದೆಯ ಪುತ್ಥಳಿ ಧ್ವಂಸ ಮಾಡಿದವರಿಂದ ಅವರ ಹೆಸರು ಅಳಿಸಲು ಸಾಧ್ಯವಿಲ್ಲ. ಅವರ ಅಸ್ತಿತ್ವಕ್ಕೆ ಮತ್ತು ಅವರ ಹೆಸರಿಗೆ ಯಾವತ್ತೂ ಧಕ್ಕೆ ಬರದಂತೆ ನಾವು ನೋಡಿಕೊಳ್ಳುತ್ತೇವೆ. ತಂದೆಯ ಹೆಸರು ಅವರ ಮೇಲಿನ ಪ್ರೀತಿ ಅಭಿಮಾನಿಗಳ ಮನಸ್ಸಿನಲ್ಲಿದೆ. ಇನ್ನೊಂದು ವರ್ಷದಲ್ಲಿ ತಂದೆಯ ಸ್ಮಾರಕ ಮೈಸೂರಿನಲ್ಲಿ ನಿರ್ಮಾಣ ಆಗಲಿದೆ. ಒಳ್ಳೆಯ ಕೆಲಸಗಳು ಸ್ವಲ್ಪ ತಡವಾಗಿಯೇ ಆಗೋದು. ತಂದೆ ಎಂದಾಕ್ಷಣ ಅವರ ಪ್ರೀತಿಯೇ ನೆನಪಾಗುತ್ತಿದೆ ಎಂದರು.
ಇಂದು ಅವರ 11ನೇ ಪುಣ್ಯ ಸ್ಮರಣೆ ಮಾಡುವ ಎಲ್ಲಾ ಅಭಿಮಾನಿಗಳಿಗೆ ನಮ್ಮ ಮನದಾಳದ ಧನ್ಯವಾದ ಎಂದು ವಿಷ್ಣು ಪುತ್ರಿ ಹೇಳಿದರು.