ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಹಿಂದೂಗಳ ನರಮೇಧಕ್ಕೆ ಭಾರತ ಪ್ರತೀಕಾರ ತೀರಿಸಿಕೊಂಡಿದೆ. ಇಂದು ಸೂರ್ಯೋದಯಕ್ಕೂ ಮುನ್ನವೇ ಪಾಕ್ನ ಉಗ್ರ ತಾಣಗಳನ್ನು ಭಾರತೀಯ ವಾಯುಪಡೆ ಧ್ವಂಸ ಮಾಡಿದೆ. ಘಟನೆ ಬಳಿಕ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಜೊತೆ ಸಶಸ್ತ್ರ ಪಡೆಗಳ ಇಬ್ಬರು ಹಿರಿಯ ಮಹಿಳಾ ಅಧಿಕಾರಿಗಳಾದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Vyomika Singh) ಮತ್ತು ಕರ್ನಲ್ ಸೋಫಿಯಾ ಖುರೇಷಿ (Sophia Qureshi) ಅವರು ಆಪರೇಷನ್ ಸಿಂಧೂರದ ಬಗ್ಗೆ ಮಾಹಿತಿ ನೀಡಿದ್ದು, ಪಾಕಿಸ್ತಾನದ ಸುಳ್ಳಿನ ಮುಖವಾಡವನ್ನು ಕಳಚಿದ್ದಾರೆ.
Leading lady
Lt Col Sophia Qureshi, 1st woman officer to lead an Army training contingent at Force18 – #ASEAN Plus multin’l field trg ex in 2016. She was only Woman Officers Contingent Commander among all #ASEAN Plus contingents. #WomensDay #IWD2020 #EachforEqual #SheInspiresUs pic.twitter.com/CkNipN02mp
— Ministry of Defence, Government of India (@SpokespersonMoD) March 8, 2020
ಮಹಿಳಾ ಅಧಿಕಾರಿಗಳಿಂದಲೇ ಸುದ್ದಿಗೋಷ್ಠಿ ನಡೆಸಿದ್ದು ಏಕೆ?
ಭಾರತ ವಿದೇಶಾಂಗ ಸಚಿವಾಲಯ ನಡೆಸಿದ ಸುದ್ದಿಗೋಷ್ಠಿಯಲ್ಲಿ, ಆಪರೇಷನ್ ಸಿಂಧೂರದ (Operation Sindoor) ಕುರಿತು ಮಹಿಳಾ ಅಧಿಕಾರಿಗಳಿಂದಲೇ ಮಾಹಿತಿ ಕೊಡಿಸಲಾಯಿತು. ಏಕೆಂದರೆ ಪಹಲ್ಗಾಮ್ ದಾಳಿಯಲ್ಲಿ 26 ಮಹಿಳೆಯರ ಸಿಂಧೂರ ಅಳಿಸಲಾಗಿತ್ತು, ಇದಕ್ಕೆ ಪ್ರತ್ಯುತ್ತರ ನೀಡಿದ ಭಾರತ ಮಹಿಳಾ ಅಧಿಕಾರಿಗಳಿಂದಲೇ ದಾಳಿಯ ವಿವರ ಕೊಡಿಸಿದೆ.
ಇನ್ನೂ ಇಡೀ ದೇಶವೇ ಕೊಂಡಾಡುತ್ತಿರುವ ಈ ಇಬ್ಬರು ಮಹಿಳಾ ಅಧಿಕಾರಿಗಳ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…
ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್
2004ರ ಡಿ.18ರಲ್ಲಿ ಭಾರತೀಯ ವಾಯುಪಡೆಗೆ (IAF) ನಿಯೋಜನೆಗೊಂಡ ವ್ಯೂಮಿಕಾ ಸಿಂಗ್ ಅವರು ಪ್ರಸ್ತುತ ಅತ್ಯುತ್ತಮ ವಿಂಗ್ ಕಮಾಂಡರ್ಗಳಲ್ಲಿ ಒಬ್ಬರಾಗಿದ್ದಾರೆ. ಚೀತಾ, ಚೇತಕ್ನಂತಹ ಯುದ್ಧ ಹೆಲಿಕಾಪ್ಟರ್ಗಳನ್ನು ಹಾರಿಸುವಲ್ಲಿ ಪರಿಣತಿ ಹೊಂದಿದ್ದಾರೆ. ವಾಯುಪಡೆಗೆ ನಿಯೋಜನೆಗೊಂಡ ಆರಂಭದಲ್ಲಿ ಹೆಲಿಕಾಪ್ಟರ್ ಪೈಲಟ್ ಆಗಿದ್ದರು, ಸತತ ಕಠಿಣ ಪರಿಶ್ರಮದಿಂದ 13 ವರ್ಷಗಳ ಬಳಿಕ ಅಂದ್ರೆ 2017 ಡಿ.18ರಲ್ಲಿ ಇವರಿಗೆ ವಿಂಗ್ ಕಮಾಂಡರ್ ಹುದ್ದೆ ನೀಡಲಾಯಿತು. 2021ರಲ್ಲಿ ವ್ಯೋಮಿಕಾ ಸಿಂಗ್ ಮಣಿರಾಂಗ್ ಪರ್ವತ ಏರಿದ ವಾಯುಪಡೆಯ ಮಹಿಳಾ ವಿಭಾಗದ ಭಾಗವಾಗಿದ್ದರು. ಇದು ಐತಿಹಾಸಿಕ ಸಾಧನೆಯೂ ಆಗಿತ್ತು.
6ನೇ ತರಗತಿಯಲ್ಲಿ ಕಂಡ ಕನಸು
ವಿಂಗ್ ಕಮಾಂಡರ್ ವ್ಯೂಮಿಕಾ ಸಿಂಗ್ ಸಾವಿರಾರು ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಆದ್ರೆ ಇಂದಿನ ಸಾಧನೆ ಸಾಮಾನ್ಯವಾದುದ್ದಲ್ಲ, ಇದು 6ನೇ ತರಗತಿಯಲ್ಲೇ ಕಂಡ ಕನಸು, ಈ ಬಗ್ಗೆ ಹಿಂದೊಮ್ಮೆ ವ್ಯೂಮಿಕಾ ಅವರೇ ಹೇಳಿಕೊಂಡಿದ್ದರು. 6ನೇ ತರಗತಿಯಲ್ಲಿದ್ದಾಗ ನನ್ನ ಹೆಸರಿನ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಾನು ಅರ್ಥ ಕೇಳಿದಾಗ ವ್ಯೂಮಿಕಾ ಅಂದ್ರೆ ಆಕಾಶವನ್ನ ತನ್ನ ಮುಷ್ಟಿಯಲ್ಲಿ ಹಿಡಿದಿರುವವರು ಎಂದರ್ಥ ಅಂತ ಹೇಳಿದ್ದರು, ಈಗ ಆಕಾಶವೇ ನನ್ನದಾಗಿದೆ ಎಂದಿದ್ದರು ವ್ಯೂಮಿಕಾ.
ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಗೊತ್ತಾ?
ಇನ್ನೂ ʻಆಪರೇಷನ್ ಸಿಂಧೂರʼದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಕರ್ನಲ್ ಸೋಫಿಯಾ ಖುರೇಷಿ (Colonel Sophia Qureshi) ಪ್ರಸ್ತುತ ಭಾರತೀಯ ಸೇನೆಯ ಸಿಗ್ನಲ್ಸ್ ದಳದ ಅಧಿಕಾರಿಯಾಗಿದ್ದಾರೆ. 2016 ರಲ್ಲಿ ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳಾ ಅಧಿಕಾರಿಯಾಗಿ ಇತಿಹಾಸ ನಿರ್ಮಿಸಿದ್ದರು. ಆ ಸಮಯದಲ್ಲಿ ಭಾರತ ಆಯೋಜಿಸಿದ್ದ ಅತಿದೊಡ್ಡ ವಿದೇಶಿ ಮಿಲಿಟರಿ ಕವಾಯತಿನಲ್ಲಿ ಅವರು ಭಾರತದ ತಂಡವನ್ನು ಮುನ್ನಡೆಸಿದ್ದರಲ್ಲದೇ ಪಾಲ್ಗೊಂಡಿದ್ದ 18 ರಾಷ್ಟ್ರಗಳ ಪೈಕಿ ಏಕೈಕ ಮಹಿಳಾ ಕಮಾಂಡರ್ ಆಗಿದ್ದರು.
ಗುಜರಾತ್ ಮೂಲದ ಕರ್ನಲ್ ಸೋಫಿಯಾ ಖುರೇಷಿ (35 ವರ್ಷ) ಮೂಲತಃ ಮಿಲಿಟರಿ ಕುಟುಂಬಕ್ಕೆ ಸೇರಿದವರು. ಜೀವರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1999 ರಲ್ಲಿ ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಿಂದ ಲೆಫ್ಟಿನೆಂಟ್ ಆಗಿ ನೇಮಕಗೊಂಡರು. ಖುರೇಷಿ 2006 ರಲ್ಲಿ ಕಾಂಗೋದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಯಲ್ಲಿಯೂ ಸೇವೆ ಸಲ್ಲಿಸಿದ್ದಾರೆ.