ವಿಜಯಪುರ: ಸಾಲ ಮಾಡಿಯಾದ್ರೂ ನಾವು ಆಲಮಟ್ಟಿ ಕೃಷ್ಣಾ ಮೂರನೇ ಹಂತದ ನೀರಾವರಿ ಯೋಜನೆಗಳನ್ನ ಪೂರ್ಣ ಮಾಡ್ತೇವೆ ಎಂದು ಆಲಮಟ್ಟಿಯಲ್ಲಿ ಸಿಎಂ ಯಡಿಯೂರಪ್ಪ ಹೇಳಿದರು.
ನಾವೀಗ ಕೊರೊನಾ ಸಂಕಷ್ಟದಲ್ಲಿದ್ದೇವೆ. ಆರ್ಥಿಕವಾಗಿಯೂ ಸಂಕಷ್ಟದಲ್ಲಿದ್ದೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲ. ಕೋವಿಡ್ ಕಾರಣಕ್ಕಾಗಿ ನಮ್ಮ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದರು.
ಉತ್ತರ ಕರ್ನಾಟಕದ ಜೀವನದಿ ಕೃಷ್ಣೆಗೆ ಸಿಎಂ ಯಡ್ಡಿಯೂರಪ್ಪ ಆಲಮಟ್ಟಿ ಜಲಾಶಯದಲ್ಲಿ ಬಾಗಿನ ಅರ್ಪಣೆ ಮಾಡಿದರು. ನಂತರ ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಜೊತೆ ಪ್ರವಾಹ ಮತ್ತು ಮಳೆ ಹಾನಿ ಬಗ್ಗೆ ಸಭೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ, ಆಲಮಟ್ಟಿ ಜಲಾಶಯದ ಎತ್ತರ ವಿಚಾರದಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈಗಾಗಲೇ ನೀರಾವರಿ ಸಚಿವರು ಕೇಂದ್ರ ಸಚಿವ ಜಲಸಂಪನ್ಮೂಲ ಸಚಿವರನ್ನ ಭೇಟಿ ಮಾಡಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇರುವುದು ನಿಜ ಎಂದರು.
ಸಂಪನ್ಮೂಲ ಕ್ರೂಡಿಕರಣ ಮಾಡಲು ಸರ್ಕಾರ ಕ್ರಮ ಕೈಗೊಂಡಿದೆ. ಬೆಳೆ ಹಾನಿ, ಮನೆಗಳ ದುರಸ್ತಿಗೆ ಹಣ ಸದುಪಯೋಗ ಮಾಡಿಕೊಳ್ಳಲಾಗುತ್ತಿದೆ. ಯಾವುದೇ ಕಾರಣಕ್ಕೂ ಹಣ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಮುಂದಿನ ತಿಂಗಳು ನಾನು ಪ್ರಧಾನಿ ಅವರನ್ನ ಭೇಟಿ ಮಾಡಿ ಆಲಮಟ್ಟಿ ಜಲಾಶಯದ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದರು.